ದಕ್ಷಿಣ ಕನ್ನಡ

​ಮಂಗಳೂರು: ಅತ್ಯುತ್ತಮ ಸೇವೆ ಸಲ್ಲಿಸಿದ 147 ಪೊಲೀಸ್ ಸಿಬ್ಬಂದಿಗೆ ಆಯುಕ್ತರಿಂದ ಗೌರವ, ಪ್ರಶಂಸನಾ ಪತ್ರ ವಿತರಣೆ

 


ನ್ಯೂಸ್ 2 ಡೇ ಕನ್ನಡ, ಮಂಗಳೂರು:

ಕರ್ತವ್ಯದಲ್ಲಿ ಅಸಾಧಾರಣ ಕಾರ್ಯದಕ್ಷತೆ, ಅಪರಾಧ ತಡೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗಮನಾರ್ಹ ಸಾಧನೆಗೆ ಕಾರಣರಾದ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ವಿಶೇಷ ಗೌರವ ಸಮರ್ಪಿಸಲಾಗಿದೆ.

​ಕಳೆದ ಆರು ತಿಂಗಳ ಅವಧಿಯಲ್ಲಿ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 29 ಪೊಲೀಸ್ ಅಧಿಕಾರಿಗಳು ಹಾಗೂ 118 ಸಿಬ್ಬಂದಿ ಒಟ್ಟು 147 ಜನರಿಗೆ ಮಾನ್ಯ ಪೊಲೀಸ್ ಆಯುಕ್ತರು ಪ್ರಶಂಸನಾ ಪತ್ರ ಹಾಗೂ ನಗದು ಬಹುಮಾನ ನೀಡಿ ಗೌರವಿಸಿದರು.

​

ಪ್ರಮುಖ ಸಾಧನೆಗಳ ವಿವರ:

  • ​ದೀರ್ಘಕಾಲದ ಬಾಕಿ ಪ್ರಕರಣಗಳು (LPC): ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎನ್‌ಬಿಡಬ್ಲ್ಯೂ (NBW) ವಾರಂಟ್ ಹೊಂದಿದ್ದ ಆರೋಪಿಗಳು ಸೇರಿದಂತೆ ಒಟ್ಟು 24 ಎಲ್.ಪಿ.ಸಿ ಪ್ರಕರಣಗಳ ಆರೋಪಿಗಳನ್ನು ಯಶಸ್ವಿಯಾಗಿ ಬಂಧಿಸಲಾಗಿದೆ.
  • ​ಕಳವು ಸೊತ್ತು ವಶ: 2026ರಲ್ಲಿ ವರದಿಯಾದ ಕಳವು ಪ್ರಕರಣಗಳ ಪೈಕಿ 88 ಪ್ರಕರಣಗಳನ್ನು ಭೇದಿಸಲಾಗಿದ್ದು, ಸುಮಾರು ₹1.20 ಕೋಟಿ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡು ವಾರಸುದಾರರಿಗೆ ಹಸ್ತಾಂತರಿಸುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
  • ​ಮಾದಕದ್ರವ್ಯ ಜಾಲಕ್ಕೆ ಪೆಟ್ಟು: ಗಾಂಜಾ ಹಾಗೂ ಮಾದಕ ವಸ್ತುಗಳ ಸಾಗಾಟ/ಮಾರಾಟಕ್ಕೆ ಸಂಬಂಧಿಸಿದಂತೆ 84 ಪ್ರಕರಣಗಳನ್ನು ದಾಖಲಿಸಿ, 142 ಪೆಡ್ಲರ್‌ಗಳನ್ನು ಜೈಲಿಗಟ್ಟಲಾಗಿದೆ. ಹಾಗೆಯೇ, ಸೇವನೆಗೆ ಸಂಬಂಧಿಸಿದಂತೆ 443 ಜನರನ್ನು (346 ಪ್ರಕರಣಗಳು) ವಶಕ್ಕೆ ಪಡೆದು, ಅವರಿಂದ ಪೆಡ್ಲರ್‌ಗಳ ಮಾಹಿತಿ ಕಲೆಹಾಕಿ ಮುಂದಿನ ಜಾಲವನ್ನು ಮಟ್ಟಹಾಕಲು ಕ್ರಮ ಕೈಗೊಳ್ಳಲಾಗಿದೆ.
  • ​ಅಂತರರಾಷ್ಟ್ರೀಯ ಸೈಬರ್ ವಂಚನೆ ಜಾಲ ಭೇದಿಸಿದ ತಂಡ: ನೇಪಾಳ ಮೂಲದಿಂದ ದೇಶಾದ್ಯಂತ ನಡೆಯುತ್ತಿದ್ದ ಹೂಡಿಕೆ ವಂಚನೆ (Investment Fraud) ಜಾಲವನ್ನು ಭೇದಿಸಿದ ಮತ್ತು ಸೈಬರ್ ವಂಚನೆಯಾದ ತಕ್ಷಣ '1930' ಸಹಾಯವಾಣಿ ಮೂಲಕ ಹಣ ಮರುಪಡೆಯಲು ನೆರವಾದ ಅಧಿಕಾರಿಗಳನ್ನು ವಿಶೇಷವಾಗಿ ಶ್ಲಾಘಿಸಲಾಯಿತು. ಸೈಬರ್ ಜಾಗೃತಿಯಿಂದಾಗಿ ನಗರದಲ್ಲಿ ಪ್ರಕರಣಗಳು ಇಳಿಮುಖವಾಗಿವೆ.
  • ​ಕೋಮು ಸೌಹಾರ್ದ ಹಾಗೂ ಸಾಮಾಜಿಕ ಜಾಲತಾಣ ನಿಗಾ: ಸೋಶಿಯಲ್ ಮೀಡಿಯಾದಲ್ಲಿ ದ್ವೇಷ ಭಾಷಣ, ಅಪಪ್ರಚಾರ ಮತ್ತು ಶಾಂತಿ ಕದಡುವ ಯತ್ನಗಳ ಮೇಲೆ ತೀವ್ರ ನಿಗಾ ವಹಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಪ್ರಕರಣ ದಾಖಲಿಸಿ ಕಾನೂನು ಸುವ್ಯವಸ್ಥೆ ಕಾಪಾಡಲಾಗಿದೆ.
  • ​ತನಿಖೆ ಹಾಗೂ ತುರ್ತು ಸೇವೆ (112): ನ್ಯಾಯಾಲಯದಲ್ಲಿ ಆರೋಪಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾದ ತನಿಖಾಧಿಕಾರಿಗಳು, ಪ್ರಮುಖ ಬಂದೋಬಸ್ತ್ ನಿರ್ವಹಿಸಿದ ಸಿಬ್ಬಂದಿ ಮತ್ತು '112 ತುರ್ತು ಸೇವೆ' ಹಾಗೂ ನಿಸ್ತಂತು ವಿಭಾಗದ ಸಿಬ್ಬಂದಿಯ ಕಾರ್ಯವೈಖರಿಯನ್ನು ಈ ಸಂದರ್ಭದಲ್ಲಿ ಮೆಚ್ಚಿ ಗೌರವಿಸಲಾಯಿತು.                                                       



image