ದಕ್ಷಿಣ ಕನ್ನಡ

ಬೆಳ್ತಂಗಡಿ : ಮ್ಯಾಟ್ರಿಮೋನಿ ಆ್ಯಪ್‌ನಲ್ಲಿ ಉದ್ಯಮಿಗೆ ಹನಿಟ್ರ್ಯಾಪ್ ಮಾದರಿ ವಂಚನೆ: 87 ಲಕ್ಷ ರೂ. ಕಳೆದುಕೊಂಡ ಬೆಳ್ತಂಗಡಿಯ ವ್ಯಕ್ತಿ!

 


ಬೆಳ್ತಂಗಡಿ:ಮ್ಯಾಟ್ರಿಮೋನಿ ಆ್ಯಪ್ ಮೂಲಕ ಪರಿಚಯಿಸಿಕೊಂಡು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಉದ್ಯಮಿಯೊಬ್ಬರಿಗೆ ಬರೋಬ್ಬರಿ 87.22 ಲಕ್ಷ ರೂಪಾಯಿ ಹಣ ವಂಚಿಸಿ, ಮಹಿಳೆಯೊಬ್ಬಳು ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

​ಬೆಳ್ತಂಗಡಿ ತಾಲೂಕಿನ ಉದ್ಯಮಿಯೊಬ್ಬರಿಗೆ 2024ರ ಮೇ ತಿಂಗಳಲ್ಲಿ ಮ್ಯಾಟ್ರಿಮೋನಿ ಆ್ಯಪ್ ಒಂದರಲ್ಲಿ 'ಅನಿಷಾ ಪಾಲನ್ನ' (35) ಎಂಬಾಕೆಯ ಪರಿಚಯವಾಗಿತ್ತು. ಆರಂಭದಲ್ಲಿ ವಾಟ್ಸಾಪ್ ಹಾಗೂ ಫೋನ್ ಕರೆಗಳ ಮೂಲಕ ಉದ್ಯಮಿಯೊಂದಿಗೆ ನಿರಂತರ ಮಾತನಾಡಿ, ಆತನ ಪೂರ್ಣ ನಂಬಿಕೆ ಗಳಿಸಿಕೊಂಡಿದ್ದಳು.

ಹಲವು ನೆಪ ಹೇಳಿ ಹಂತ ಹಂತವಾಗಿ ಹಣ ವರ್ಗಾವಣೆ

​ಉದ್ಯಮಿಯ ವಿಶ್ವಾಸ ಗಿಟ್ಟಿಸಿಕೊಂಡ ನಂತರ ತನ್ನ ನೈಜ ರೂಪ ತೋರಿಸಲಾರಂಭಿಸಿದ ಆರೋಪಿ, 2024ರ ಸೆಪ್ಟೆಂಬರ್ 26ರಿಂದ 2025ರ ಜನವರಿ 20ರ ನಡುವಿನ ಅವಧಿಯಲ್ಲಿ ತನಗೆ ತುರ್ತು ಕಷ್ಟ ಎದುರಾಗಿದೆ ಎಂದು ಹಲವು ಕಾರಣಗಳನ್ನು ನೀಡಿದ್ದಳು. ಆಕೆಯ ಮಾತುಗಳನ್ನು ನಂಬಿದ ಉದ್ಯಮಿ, ಆಕೆ ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 87,22,710 ರೂಪಾಯಿಗಳನ್ನು ಆನ್‌ಲೈನ್ ಮುಖೇನ ವರ್ಗಾಯಿಸಿದ್ದರು.

ಮೊಬೈಲ್ ಸ್ವಿಚ್ ಆಫ್; ಪೊಲೀಸ್ ದೂರು ದಾಖಲು

​ಹಣ ಕೈಸೇರಿದ ಬಳಿಕ ಆರೋಪಿ ಅನಿಷಾ ತನ್ನ ಮೊಬೈಲ್ ಸಂಪರ್ಕವನ್ನು ಸಂಪೂರ್ಣವಾಗಿ ಕಡಿತಗೊಳಿಸಿ ತಲೆಮರೆಸಿಕೊಂಡಿದ್ದಾಳೆ. ಆಕೆಯನ್ನು ಸಂಪರ್ಕಿಸಲು ಉದ್ಯಮಿ ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ತಾನು ಮೋಸ ಹೋಗಿರುವುದು ಖಚಿತವಾಗುತ್ತಿದ್ದಂತೆ, ಸಂತ್ರಸ್ತ ಉದ್ಯಮಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

​ದೂರಿನ ಅನ್ವಯ ಬೆಳ್ತಂಗಡಿ ಪೊಲೀಸರು ಆರೋಪಿ ಅನಿಷಾ ಪಾಲನ್ನ ವಿರುದ್ಧ ಅಪರಾಧ ಸಂಖ್ಯೆ 78/2026 ಹಾಗೂ BNS (ಭಾರತೀಯ ನ್ಯಾಯ ಸಂಹಿತೆ) ಕಲಂ 318(4) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.



image