
ಬಂಟ್ವಾಳ: ಪ್ರಸಿದ್ಧ ಕಾರಣಿಕ ಕ್ಷೇತ್ರವಾದ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳ ಸೌಕರ್ಯ ಹಾಗೂ ಕ್ಷೇತ್ರದ ಧಾರ್ಮಿಕ ಪದ್ಧತಿ-ಸಂಪ್ರದಾಯಗಳನ್ನು ಕಾಪಾಡುವ ನಿಟ್ಟಿನಲ್ಲಿ ದೈವಸ್ಥಾನದ ಆಡಳಿತ ಮಂಡಳಿಯು ಹಲವು ಪ್ರಮುಖ ಸೂಚನೆಗಳನ್ನು ಹೊರಡಿಸಿದೆ.
ಧಾರ್ಮಿಕ ಪದ್ಧತಿಯಂತೆ ಮಕ್ಕಳಿಗೆ ಚೊಚ್ಚಲ ಬಾರಿಗೆ ಅನ್ನ ಉಣಿಸುವ (ಅನ್ನಪ್ರಾಶನ) ಹರಕೆ ಕೊಡುವ ಭಕ್ತರ ಅನುಕೂಲಕ್ಕಾಗಿ, ಇನ್ನು ಮುಂದೆ 6 ತಿಂಗಳಿಂದ 1 ವರ್ಷದೊಳಗಿನ ಮಕ್ಕಳಿಗೆ ಮಾತ್ರ ದೈವಸ್ಥಾನದಲ್ಲಿ ಅನ್ನಪ್ರಸಾದ ನೀಡಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.
ಇದರೊಂದಿಗೆ, ದೈವಸ್ಥಾನದ ಆವರಣದಲ್ಲಿ ಯಾವುದೇ ಕಾರಣಕ್ಕೂ ಬಾಲ್ಯವಿವಾಹ ನಡೆಸಬಾರದು ಎಂದು ಭಕ್ತರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕಾನೂನುಬಾಹಿರ ಕಾರ್ಯಗಳಿಗೆ ಕ್ಷೇತ್ರದಲ್ಲಿ ಆಸ್ಪದವಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ.
ಇನ್ನೊಂದು ಪ್ರಮುಖ ನಿರ್ಧಾರವೆಂದರೆ, ದೈವಸ್ಥಾನದ ಸ್ವಚ್ಛತೆ ಮತ್ತು ಪವಿತ್ರತೆಯನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಆಗಸ್ಟ್ 18ರಿಂದ ಜಾರಿಗೆ ಬರುವಂತೆ ದೈವಸ್ಥಾನದ ಮುಂಭಾಗ ಹಾಗೂ ಆವರಣದಲ್ಲಿ ಅಗರ್‌ಬತ್ತಿ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಕ್ಷೇತ್ರದ ನಿಯಮಗಳು ಮತ್ತು ಸನಾತನ ಸಂಪ್ರದಾಯಗಳಿಗೆ ಭಕ್ತಾದಿಗಳು ಪೂರ್ಣ ಸಹಕಾರ ನೀಡಬೇಕಾಗಿ ಕಾರ್ಯನಿರ್ವಹಣಾಧಿಕಾರಿಗಳು ವಿನಂತಿಸಿದ್ದಾರೆ. ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ದೈವಸ್ಥಾನದ ಅಧಿಕೃತ ಕಚೇರಿ ದೂರವಾಣಿ ಸಂಖ್ಯೆ: 7090280166 ಅನ್ನು ಸಂಪರ್ಕಿಸಬಹುದು.