ಬಿ.ಸಿ.ರೋಡ್:ಇಲ್ಲಿನ ಹೃದಯಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನೂತನವಾಗಿ ನಿರ್ಮಾಣಗೊಂಡ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಉದ್ಘಾಟನೆ ಹಾಗೂ ಗುರುಗಳ 172ನೇ ಜನ್ಮದಿನಾಚರಣೆಯ ಪ್ರಯುಕ್ತ ಗುರುಪೂಜೋತ್ಸವ ಮತ್ತು ವಿದ್ಯಾರ್ಥಿವೇತನ ವಿತರಣಾ ಸಮಾರಂಭವು ರವಿವಾರ ವೈಭವದಿಂದ ನೆರವೇರಿತು. ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಈ ಸೌಹಾರ್ದಮಯ ಹಾಗೂ ಅದ್ದೂರಿ ಕಾರ್ಯಕ್ರಮ ಆಯೋಜನೆಗೊಂಡಿತ್ತು.
ಬೆಳಿಗ್ಗೆ 11 ಗಂಟೆಗೆ ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ಗೌರವಾನ್ವಿತ ಉಪಸ್ಥಿತಿಯಲ್ಲಿ, ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ವೃತ್ತವನ್ನು ಉದ್ಘಾಟಿಸಿ ಲೋಕಾರ್ಪಣೆಗೊಳಿಸಿದರು. ಈ ಸೌಂದರ್ಯೀಕರಿಸಿದ ವೃತ್ತದ ಸಂಪೂರ್ಣ ನಿರ್ವಹಣೆಯ ಹೊಣೆಯನ್ನು ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ ವಹಿಸಿಕೊಳ್ಳಲಿದೆ.
ತತ್ವಾದರ್ಶಗಳ ಪಾಲನೆ ಇಂದಿನ ಅಗತ್ಯ: ಸಂಸದ ಕ್ಯಾ. ಬ್ರಿಜೇಶ್ ಚೌಟ
ಉದ್ಘಾಟನೆ ಬಳಿಕ ನಡೆದ ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, "ಮೌನ ಕ್ರಾಂತಿಯ ಮೂಲಕ ಇಡೀ ಸಮಾಜಕ್ಕೆ ಜ್ಞಾನದ ಬೆಳಕು ಚೆಲ್ಲಿದ ಶ್ರೇಷ್ಠ ದಾರ್ಶನಿಕ ಬ್ರಹ್ಮಶ್ರೀ ನಾರಾಯಣಗುರುಗಳು. ಅವರ ಸಿದ್ಧಾಂತ, ತತ್ವ ಮತ್ತು ಸಂದೇಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ" ಎಂದು ಅಭಿಪ್ರಾಯಪಟ್ಟರು.
ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಸಂತಸ: ಭುವನೇಶ್ ಪಚ್ಚಿನಡ್ಕ
ಸಭೆಯ ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಮಾತನಾಡಿ, "ಹಿಂದೆ ನನ್ನ ತಂದೆಯವರಾದ ಸೇಸಪ್ಪ ಕೋಟ್ಯಾನ್ ಅವರ ಅಧ್ಯಕ್ಷತೆಯ ಅವಧಿಯಲ್ಲಿ ಈ ವೃತ್ತವನ್ನು ಉದ್ಘಾಟಿಸಲಾಗಿತ್ತು. ಇದೀಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಿರ್ಮಿಸಿಕೊಟ್ಟಿರುವ ಸುಂದರ ವೃತ್ತವನ್ನು ಅಪಾರ ಜನಸ್ತೋಮ ಹಾಗೂ ಗಣ್ಯರ ಸಮ್ಮುಖದಲ್ಲಿ ಲೋಕಾರ್ಪಣೆಗೊಳಿಸಿರುವುದು ನನ್ನ ಅಧ್ಯಕ್ಷತೆಯ ಅವಧಿಯ ಹೆಮ್ಮೆಯ ಕ್ಷಣ. ಸಮಾಜದ ಶೈಕ್ಷಣಿಕ ಪ್ರಗತಿಗೆ ಎಲ್ಲರೂ ಮುಕ್ತವಾಗಿ ಸಹಕರಿಸಬೇಕು" ಎಂದು ಕರೆ ನೀಡಿದರು.
ಸಮಾನತೆ ಹಾಗೂ ಸೌಹಾರ್ದತೆಯ ಹರಿಕಾರ: ಕೆ. ಹರಿಕೃಷ್ಣ ಬಂಟ್ವಾಳ
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಸಂಘದ ಮಾಜಿ ಅಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ, "ನಾರಾಯಣಗುರುಗಳು ಅಜ್ಞಾನದ ಅಂಧಕಾರದಲ್ಲಿದ್ದ ಜನರನ್ನು ಜ್ಞಾನದೆಡೆಗೆ ಮುನ್ನಡೆಸಿದ ಅಪ್ರತಿಮ ರಾಷ್ಟ್ರಭಕ್ತರು. 'ಮಾನವ ಧರ್ಮವೇ ಶ್ರೇಷ್ಠ ಧರ್ಮ' ಎಂಬ ಸಂದೇಶ ಸಾರಿದ ಅವರ ಆಲೋಚನೆಗಳು ಸರ್ವಕಾಲಕ್ಕೂ ಅನ್ವಯಿಸುತ್ತವೆ" ಎಂದರು.
ಅಲ್ಲದೆ, ವೃತ್ತದ ಹಿನ್ನೆಲೆಯನ್ನು ಸ್ಮರಿಸಿದ ಅವರು, "2016ರಲ್ಲಿ ಪುರಸಭೆಯ ಬಹುಮತದ ಒಪ್ಪಿಗೆಯೊಂದಿಗೆ ಈ ಜಾಗಕ್ಕೆ ನಾರಾಯಣಗುರುಗಳ ಹೆಸರು ನಾಮಕರಣ ಮಾಡಲಾಗಿತ್ತು. ಆ ಬಳಿಕ ಸಂಘದ ವೆಚ್ಚದಲ್ಲೇ ವೃತ್ತ ನಿರ್ಮಿಸಲಾಗಿತ್ತು. ಆದರೆ ಹೆದ್ದಾರಿ ಅಗಲೀಕರಣದ ವೇಳೆ ವೃತ್ತವನ್ನು ತೆರವುಗೊಳಿಸಲಾಗಿದ್ದು, ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ವಿಶೇಷ ಮುತುವರ್ಜಿಯಿಂದಾಗಿ ಇಂದು ಎನ್‌ಎಚ್‌ಎಐ ಸಂಸ್ಥೆಯೇ ನೂತನ ವೃತ್ತವನ್ನು ಸುಸಜ್ಜಿತವಾಗಿ ನಿರ್ಮಿಸಿಕೊಟ್ಟಿದೆ" ಎಂದು ವಿವರಿಸಿದರು.
ಜ್ಞಾನ ಮಂದಿರ ಹಾಗೂ ನಾವೂರು ಶೇಖರ ಮಠ: ಮಾಜಿ ಸಚಿವ ಬಿ. ರಮಾನಾಥ ರೈ
ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, "ಮಹಾತ್ಮಾ ಗಾಂಧೀಜಿ ಹಾಗೂ ಪೋಪ್ ಅವರಂತಹ ಜಾಗತಿಕ ನಾಯಕರೇ ನಾರಾಯಣಗುರುಗಳ ಮಹತ್ವವನ್ನು ಕೊಂಡಾಡಿದ್ದಾರೆ. ಹಿಂದುಳಿದ ವರ್ಗಗಳಲ್ಲಿ ಸ್ವಾಭಿಮಾನ ಮೂಡಿಸಿದ ಶ್ರೇಷ್ಠ ಸಂತರು ಅವರು. ರಾಜ್ಯದಲ್ಲಿ ಶ್ರೀಗುರುಗಳ ಜಯಂತಿ ಆಚರಣೆಗೆ ಸಜೀಪಮೂಡದ ಜ್ಞಾನ ಮಂದಿರದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಶೀಘ್ರದಲ್ಲೇ ಬಂಟ್ವಾಳ ತಾಲೂಕಿನ ನಾವೂರಿನಲ್ಲಿ ಶಿವಗಿರಿ ಮಠದ ಶಾಖಾ ಮಠ ಸ್ಥಾಪನೆಯಾಗಲಿದೆ" ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಶುಭ ಹಾರೈಸಿದರು. ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ, "ವಿದ್ಯಾರ್ಥಿಗಳು ತಮಗೆ ಸಿಕ್ಕಿದ ವಿದ್ಯಾರ್ಥಿವೇತನದ ಮೌಲ್ಯವನ್ನು ಅರಿತು ಶೈಕ್ಷಣಿಕವಾಗಿ ಮುನ್ನಡೆಯಬೇಕು" ಎಂದು ಸಲಹೆ ನೀಡಿದರು.
ಗಣ್ಯರ ಉಪಸ್ಥಿತಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳು:
ವೇದಿಕೆಯಲ್ಲಿ ಮಾಜಿ ಶಾಸಕರಾದ ಎ. ರುಕ್ಮಯ ಪೂಜಾರಿ, ಕೆ. ಪದ್ಮನಾಭ ಕೊಟ್ಟಾರಿ, ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪೂಜಾರಿ ಮೆಲ್ಕಾರ್, ಜೊತೆ ಕಾರ್ಯದರ್ಶಿ ಆನಂದ ಸಾಲಿಯಾನ್ ಶಂಭೂರು, ಕೋಶಾಧಿಕಾರಿ ಸುನೀಲ್ ಎಸ್. ಕುಂದರ್ ಮೊಡಂಕಾಪು, ಲೆಕ್ಕಪರಿಶೋಧಕ ಪ್ರಶಾಂತ್ ಕೋಟ್ಯಾನ್ ಸಂಚಯಗಿರಿ, ಮಹಿಳಾ ಸಮಿತಿ ಅಧ್ಯಕ್ಷೆ ರಾಗಿಣಿ ಮಾಧವ ಹಾಗೂ ಯುವವಾಹಿನಿ ಅಧ್ಯಕ್ಷ ಕಿರಣ್ ಪೂಂಜರಕೋಡಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಎಂಜಿನಿಯರ್ ಸುಜಯ್ ಲೋಬೊ ಅವರನ್ನು ಸನ್ಮಾನಿಸಲಾಯಿತು. ಪ್ರೇಮನಾಥ ಕರ್ಕೇರ ಅವರು ಅರ್ಹ ವಿದ್ಯಾರ್ಥಿವೇತನ ಪುರಸ್ಕೃತರ ಪಟ್ಟಿ ವಾಚಿಸಿದರು.
ಸಂಪ್ರದಾಯಬದ್ಧ ಆಚರಣೆ:
ಬೆಳಿಗ್ಗೆ 7ರಿಂದ ಗುರುಮಂದಿರದಲ್ಲಿ ಭಜನೆ, ಗುರುಪೂಜೆ ಹಾಗೂ ಮಹಾಪೂಜೆ ಜರುಗಿದವು. ವೃತ್ತ ಲೋಕಾರ್ಪಣೆ ಹಾಗೂ ಸಭಾ ಕಾರ್ಯಕ್ರಮದ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು. ಮಧ್ಯಾಹ್ನದ ನಂತರ ತುಳು ಚಲನಚಿತ್ರ 'ದೇಯಿ ಬೈದೇತಿ' ಪ್ರದರ್ಶನಗೊಂಡಿತು.
ಕಾರ್ಯಕ್ರಮಕ್ಕೆ ಬಿಲ್ಲವ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಜಯಪ್ರಕಾಶ್ ಜೆ.ಎಸ್. ಜಕ್ರಿಬೆಟ್ಟು ಸ್ವಾಗತಿಸಿ, ಯುವವಾಹಿನಿ ಮಾಜಿ ಅಧ್ಯಕ್ಷ ದಿನೇಶ ಸುವರ್ಣ ರಾಯಿ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪೂಜಾರಿ ಮೆಲ್ಕಾರ್ ವಂದಿಸಿದರು.
