ಬಂಟ್ವಾಳ: ಚಲಿಸುವ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಹಠಾತ್ ಹೃದಯಾಘಾತದಿಂದ ಕುಸಿದುಬಿದ್ದ ವ್ಯಕ್ತಿಯೊಬ್ಬರಿಗೆ ಸಹಪ್ರಯಾಣಿಕರು ಹಾಗೂ ಬಸ್ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ಪ್ರಥಮ ಚಿಕಿತ್ಸೆ ನೀಡಿ, ತಕ್ಷಣ ಆಸ್ಪತ್ರೆಗೆ ಸೇರಿಸುವ ಮೂಲಕ ನವಜೀವನ ನೀಡಿದ ಪ್ರಸಂಗ ಮೆಲ್ಕಾರ್ ಸಮೀಪ ನಡೆದಿದೆ.
ಕುಕ್ಕಾಜೆ ನಿವಾಸಿ ರಹೀಮ್ ಎಂಬವರು ಭಾನುವಾರ ಸಂಜೆ 4.45ರ ಸುಮಾರಿಗೆ ಮೆಲ್ಕಾರ್‌ನಿಂದ ಪುತ್ತೂರು ಮಾರ್ಗದ ಕೆಎಸ್‌ಆರ್‌ಟಿಸಿ ಬಸ್ ಹತ್ತಿದ್ದರು. ಪ್ರಯಾಣ ಆರಂಭವಾದ ಕೆಲವೇ ಕ್ಷಣಗಳಲ್ಲಿ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡು ಬಸ್ಸಿನಲ್ಲೇ ಕುಸಿದುಬಿದ್ದರು.
ಈ ವೇಳೆ ಅದೇ ಬಸ್ಸಿನಲ್ಲಿದ್ದ ಯೇನೆಪೋಯ ವಿಶ್ವವಿದ್ಯಾಲಯದ ಐಟಿ ಸಿಬ್ಬಂದಿ ಜಗದೀಶ್ ಬೆಳ್ಳಾರೆ ಅವರು ತಕ್ಷಣ ಸ್ಪಂದಿಸಿ, ಪ್ರಯಾಣಿಕನ ಸ್ಥಿತಿಯನ್ನು ಗಮನಿಸಿ ಪ್ರಥಮ ಚಿಕಿತ್ಸೆಗೆ ಮುಂದಾದರು. ವಿಷಯ ತಿಳಿಯುತ್ತಿದ್ದಂತೆ ಬಸ್ಸಿನಲ್ಲಿದ್ದ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಹ ನೆರವಿಗೆ ಧಾವಿಸಿ, ಆಸ್ಪತ್ರೆ ತಲುಪುವವರೆಗೂ ನಿರಂತರವಾಗಿ ಸಿಪಿಆರ್ (CPR) ನೀಡುತ್ತಾ ಜೀವ ಉಳಿಸಲು ಶ್ರಮಿಸಿದರು.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಬಸ್ ಚಾಲಕ ಮತ್ತು ನಿರ್ವಾಹಕರು ತಡಮಾಡದೆ ಬಸ್ಸನ್ನು ನೇರವಾಗಿ ಕಲ್ಲಡ್ಕದ ಪುಷ್ಪರಾಜ ಆಸ್ಪತ್ರೆಯತ್ತ ಚಲಾಯಿಸಿ, ರಹೀಮ್ ಅವರನ್ನು ಪ್ರಾಥಮಿಕ ಚಿಕಿತ್ಸೆಗೆ ದಾಖಲಿಸಿದರು. ಇದೇ ವೇಳೆ ಯೇನೆಪೋಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಬಾಲಚಂದ್ರ ಭಟ್ ಅವರು ಕೂಡ ಸ್ಥಳಕ್ಕೆ ಆಗಮಿಸಿ ತುರ್ತು ವೈದ್ಯಕೀಯ ನೆರವು ಒದಗಿಸಿದರು.
ಸಂಕಷ್ಟದ ಸಮಯದಲ್ಲಿ ಜಾತಿ-ಧರ್ಮದ ಎಲ್ಲೆ ಮೀರಿ ಮಾನವೀಯತೆ ಮೆರೆದ ಜಗದೀಶ್ ಬೆಳ್ಳಾರೆ, ವೈದ್ಯಕೀಯ ವಿದ್ಯಾರ್ಥಿಗಳು, ಬಸ್ ಸಿಬ್ಬಂದಿ ಹಾಗೂ ಸಾರ್ವಜನಿಕರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಸಮಯಕ್ಕೆ ಸರಿಯಾಗಿ ಸ್ಪಂದಿಸಿ ತಮ್ಮ ಪ್ರಾಣ ಉಳಿಸಿದ ಪ್ರತಿಯೊಬ್ಬರಿಗೂ ರಹೀಮ್ ಕುಕ್ಕಾಜೆ ಅವರು ಹೃದಯಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ.