ಮಂಗಳೂರು (ಉಳ್ಳಾಲ): ಮದ್ಯದ ಅಮಲಿನಲ್ಲಿ ಸಾರ್ವಜನಿಕವಾಗಿ ತಲವಾರು ಝಳಪಿಸಿ ಬೆದರಿಕೆ ಒಡ್ಡುತ್ತಿದ್ದ ರೌಡಿಶೀಟರ್ ಸೇರಿದಂತೆ ಇಬ್ಬರು ಕಿಡಿಗೇಡಿಗಳನ್ನು ಉಳ್ಳಾಲ ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.
ಉಳ್ಳಾಲ ಮಾರ್ಗತಲೆ ನಿವಾಸಿ, ವೃತ್ತಿಯಲ್ಲಿ ವೆಲ್ಡರ್ ಆಗಿರುವ ಮೊಹಮ್ಮದ್ ಶಾಕಿರ್ (31) ಹಾಗೂ ಮಂಚಿಲ ನಿವಾಸಿ, ಆಟೋ ಚಾಲಕ ಅಶ್ಪಕ್ (28) ಬಂದಿತ ಆರೋಪಿಗಳು. ಇವರಲ್ಲಿ ಅಶ್ಪಕ್ ಪೊಲೀಸ್ ದಾಖಲೆಗಳಲ್ಲಿ ರೌಡಿಶೀಟರ್ ಆಗಿದ್ದಾನೆ ಎಂದು ತಿಳಿದುಬಂದಿದೆ.
ಘಟನೆಯ ವಿವರ:
ಶನಿವಾರ ತಡರಾತ್ರಿ ಸುಮಾರು 12.15ರ ವೇಳೆಗೆ ತೊಕ್ಕೊಟ್ಟಿನ ಬಾರ್ ಒಂದರ ಸಮೀಪ ಮದ್ಯದ ಅಮಲಿನಲ್ಲಿದ್ದ ಆರೋಪಿಗಳು, ಕೈಯಲ್ಲಿ ತಲವಾರು ಹಿಡಿದು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುವ ರೀತಿಯಲ್ಲಿ ವರ್ತಿಸುತ್ತಿದ್ದರು. ಈ ಕುರಿತು ಮಾಹಿತಿ ತಲುಪುತ್ತಿದ್ದಂತೆಯೇ ತಕ್ಷಣ ಸ್ಥಳಕ್ಕೆ ಧಾವಿಸಿದ ಉಳ್ಳಾಲ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ಕಸ್ಟಡಿಗೆ ಪಡೆದಿದ್ದಾರೆ.
ಆರೋಪಿಗಳ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ (ಆರ್ಮ್ಸ್ ಆಕ್ಟ್) ಹಾಗೂ ಸಾರ್ವಜನಿಕ ಶಾಂತಿ ಕಣ್ಮರೆಗೊಳಿಸಿದ ಹಿನ್ನೆಲೆಯಲ್ಲಿ ವಿವಿಧ ಕಠಿಣ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲಾಗಿದೆ.