ನ್ಯೂಸ್ 2 ಡೇ ಕನ್ನಡ ಡಿಜಿಟಲ್ ಡೆಸ್ಕ್:ನವದೆಹಲಿ
ದಕ್ಷಿಣ ಕನ್ನಡ, ಕರಾವಳಿ ಹಾಗೂ ಮಲೆನಾಡು ಭಾಗದ ಪ್ರಮುಖ ತೋಟಗಾರಿಕಾ ಬೆಳೆಗಳಾದ ಅಡಿಕೆ, ತೆಂಗು, ಕೋಕೋ ಮತ್ತು ಸಾಂಬಾರು ಬೆಳೆಗಾರರು ಎದುರಿಸುತ್ತಿರುವ ಹವಾಮಾನ ವೈಪರೀತ್ಯದ ಸವಾಲುಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಲೋಕಸಭೆಯಲ್ಲಿ ಧ್ವನಿಯೆತ್ತಿದ್ದಾರೆ.
ಲೋಕಸಭೆಯ ನಿಯಮ 377ರ ಅಡಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಅವರು, ಪ್ರಸ್ತುತ ಚಾಲ್ತಿಯಲ್ಲಿರುವ ‘ಪುನರ್ ರಚಿತ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ’ಯನ್ನು (RWBCIS) ಸ್ಥಳೀಯ ಸವಾಲುಗಳಿಗೆ ತಕ್ಕಂತೆ ತಕ್ಷಣವೇ ಪರಿಷ್ಕರಿಸಬೇಕೆಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವನ್ನು ಒತ್ತು ನೀಡಿ ಒತ್ತಾಯಿಸಿದರು.
ಬೆಳೆಗಾರರು ಎದುರಿಸುತ್ತಿರುವ ನೈಜ ಸವಾಲುಗಳು:
ಸಾಮಾನ್ಯ ಋತುಮಾನದ ಬೆಳೆಗಳಿಗಿಂತ ಬಹು ವಾರ್ಷಿಕ ತೋಟಗಾರಿಕಾ ಬೆಳೆಗಳ ಸವಾಲುಗಳು ಸಂಪೂರ್ಣ ವಿಭಿನ್ನವಾಗಿವೆ. ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ನಿರಂತರ ಮಳೆ, ಗಾಳಿಯಲ್ಲಿನ ತೇವಾಂಶ (ಆರ್ದ್ರತೆ), ಶಿಲೀಂಧ್ರ ಹಾಗೂ ರೋಗಬಾಧೆ, ತೋಟದ ಪಾತಿಗಳಲ್ಲಿ ನೀರು ನಿಲ್ಲುವುದು ಮುಂತಾದ ಕಾರಣಗಳಿಂದ ಬೆಳೆಗಳು ತೀವ್ರವಾಗಿ ಹಾನಿಗೊಳಗಾಗುತ್ತಿವೆ.
ಹತ್ತಿರದ ಹವಾಮಾನ ಮಾಪನ ಕೇಂದ್ರಗಳಲ್ಲಿ ಮಳೆ ಅಥವಾ ತಾಪಮಾನದ ಪ್ರಮಾಣವು ನಿಗದಿತ ಮಿತಿಯನ್ನು ದಾಟದೇ ಇದ್ದರೂ, ಪ್ರತ್ಯಕ್ಷವಾಗಿ ತೋಟಗಳಲ್ಲಿ ಶೇ.100 ರಷ್ಟು ಬೆಳೆ ನಾಶವಾಗಿರುವ ಉದಾಹರಣೆಗಳಿವೆ. ಹೀಗಾಗಿ, ಹವಾಮಾನ ಕೇಂದ್ರದ ಸಿದ್ಧ ಸೂತ್ರಗಳಿಗಿಂತ ತೋಟಗಾರಿಕಾ ಬೆಳೆಗಳಿಗೆ ಸಂಭವಿಸುವ ನೈಜ ನಷ್ಟವನ್ನು ಆಧರಿಸಿ ವಿಮಾ ನಷ್ಟಪರಿಹಾರದ ಮಾನದಂಡಗಳನ್ನು ಮರುರೂಪಿಸುವುದು ಅತ್ಯಗತ್ಯ ಎಂದು ಸಂಸದರು ಪ್ರತಿಪಾದಿಸಿದರು.
ಸಂಸದರು ನೀಡಿದ ಪ್ರಮುಖ ಸಲಹೆಗಳು:
- ತಜ್ಞರ ಜಂಟಿ ಸಮಿತಿ ರಚನೆ: ಕೇಂದ್ರ ಕೃಷಿ ಸಚಿವಾಲಯವು ಕೃಷಿ ವಿಜ್ಞಾನಿಗಳು ಹಾಗೂ ವಿಮಾ ಆಡಿಟರ್‌ಗಳನ್ನು ಒಳಗೊಂಡ ಜಂಟಿ ಸಮಿತಿಯನ್ನು ತಕ್ಷಣ ರಚಿಸಬೇಕು. ಹವಾಮಾನ ಕೇಂದ್ರಗಳ ಸಾಂದ್ರತೆ ಹೆಚ್ಚಿಸುವುದು, ಅಧಿಸೂಚಿತ ಯೂನಿಟ್‌ಗಳ ಗಾತ್ರ ಮರುನಿರ್ಧಾರ, ಮಳೆ ಮತ್ತು ತೇವಾಂಶ ಮಾಪನ ವ್ಯವಸ್ಥೆ, ವಿಮಾ ಮೊತ್ತ ಹಾಗೂ ಪರಿಹಾರ ಪಾವತಿಯ ಕಾಲಮಿತಿಯನ್ನು ವೈಜ್ಞಾನಿಕವಾಗಿ ನಿಗದಿಪಡಿಸಬೇಕು.
- ಸಮಗ್ರ ಪಾಲುದಾರರ ಸಹಭಾಗಿತ್ವ: ಈ ಯೋಜನೆಯ ರೂಪುರೇಷೆ ಸಿದ್ಧಪಡಿಸುವಾಗ ICAR ಸಂಸ್ಥೆಗಳು, ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯಗಳು, ವಿಮಾ ಕಂಪನಿಗಳು, ಕರ್ನಾಟಕ ಸರ್ಕಾರ ಹಾಗೂ ಬೆಳೆಗಾರರ ಒಕ್ಕೂಟಗಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು.
- ಪ್ರಾಯೋಗಿಕ ಜಾರಿ ಮತ್ತು ಪಾರದರ್ಶಕತೆ: ನೂತನ ವಿಮಾ ವ್ಯವಸ್ಥೆಯನ್ನು ದೇಶವ್ಯಾಪಿ ಜಾರಿಗೆ ತರುವ ಮೊದಲು, ಕರಾವಳಿ ಮತ್ತು ಮಲೆನಾಡಿನ ಆಯ್ದ ಜಿಲ್ಲೆಗಳಲ್ಲಿ ಬೆಳೆ ನಾಶದ ಆಧಾರದ ಮೇಲೆ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಬೇಕು. ಜೊತೆಗೆ ‘ಟ್ರಿಗರ್ ಆಧಾರಿತ’ ಪರಿಹಾರ ಪಾವತಿಯ ಮಾಹಿತಿಯನ್ನು ರೈತರಿಗೆ ಪಾರದರ್ಶಕವಾಗಿ ಒದಗಿಸಬೇಕು.
- ರಾಜ್ಯಗಳಿಗೆ ಮಾರ್ಗದರ್ಶನ: ಸೂಕ್ತ ತೋಟಗಾರಿಕಾ ಬೆಳೆಗಳನ್ನು ವಿಮೆ ವ್ಯಾಪ್ತಿಗೆ ತರಲು ರಾಜ್ಯ ಸರ್ಕಾರಗಳಿಗೆ ಅನುಕೂಲವಾಗುವಂತೆ ಮಾದರಿ ಅಧಿಸೂಚನೆ ಟೆಂಪ್ಲೇಟ್ ಮತ್ತು ನಿರ್ದಿಷ್ಟ ಕಾಲಮಿತಿಯನ್ನು ಕೇಂದ್ರ ಸರ್ಕಾರ ಒದಗಿಸಿಕೊಡಬೇಕು.
