ಉಡುಪಿ

ಮುಲ್ಕಿ: ಚಂದ್ರಮೌಳೇಶ್ವರ ದೇಗುಲದ ಹುಂಡಿ ಕಳವು ಪ್ರಕರಣ; ಖತರ್ನಾಕ್ ಕಳ್ಳ ಪೊಲೀಸರ ಬಲೆಗೆ!

 


ವಿಶೇಷ ವರದಿ, ನ್ಯೂಸ್‌2ಡೇ ಕನ್ನಡ (news2daykannada.com)

​ಮುಲ್ಕಿ: ಇಲ್ಲಿನ ಪ್ರಸಿದ್ಧ ಬೆಳ್ಳಾಯರು ಕೊಲ್ನಾಡು ಶ್ರೀ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ನಡೆದ ಕಾಣಿಕೆ ಹುಂಡಿ ಕಳ್ಳತನ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಮುಲ್ಕಿ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಸಣ್ಣಪುಲಿಕೊಟ್ಟ ಗ್ರಾಮದ ನಿವಾಸಿ ರವಿಕುಮಾರ ಯಾನೆ ರವಿ ಎಚ್. ಜಿ. (20) ಎಂದು ಗುರುತಿಸಲಾಗಿದೆ.

​ಸಿಸಿಟಿವಿ ಕ್ಯಾಮೆರಾ ತಿರುಗಿಸಿ ಕಳವಿಗೆ ಯತ್ನ

ಆಗಸ್ಟ್ 18ರ ಮಧ್ಯರಾತ್ರಿ ದೇವಾಲಯದ ಛಾವಣಿಯ ಜಾಲರಿಯನ್ನು ಸರಿಸಿ ಒಳಪ್ರವೇಶಿಸಿದ್ದ ಆರೋಪಿ, ತನ್ನ ಗುರುತು ಸಿಗದಂತೆ ಸಿಸಿಟಿವಿ ಕ್ಯಾಮೆರಾವನ್ನು ಬದಿಗೊತ್ತಿದ್ದ. ಬಳಿಕ ಕಾಣಿಕೆ ಡಬ್ಬಿಯ ಬೀಗ ಮುರಿದು ನಗದು ದೋಚಲು ಯತ್ನಿಸಿದ್ದಾನೆ. ಆದರೆ, ಈ ವೇಳೆ ದೇಗುಲದಲ್ಲಿದ್ದ ಸಿಸಿಟಿವಿ ಸೆಕ್ಯುರಿಟಿ ಸೈರನ್ ಮೊಳಗಿದ್ದರಿಂದ ಸ್ಥಳೀಯರು ತಕ್ಷಣ ಜಾಗೃತರಾಗಿದ್ದಾರೆ.

​ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಆರೋಪಿ

ಸೈರನ್ ಶಬ್ದ ಕೇಳಿ ಸ್ಥಳಕ್ಕಾಗಮಿಸಿದ ಸಾರ್ವಜನಿಕರು ಹಾಗೂ ಮುಲ್ಕಿ ಪೊಲೀಸ್ ಠಾಣೆಯ ಪಿಎಸ್‌ಐ ನೇತೃತ್ವದ ತಂಡ ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಘಟನಾ ಸ್ಥಳದಲ್ಲೇ ರೆಡ್‌ ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ. ಬಂಧಿತನಿಂದ ಕಳವು ಮಾಡಲಾಗಿದ್ದ 2,195 ರೂಪಾಯಿ ನಗದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

​ಹಲವು ಠಾಣೆಗಳಲ್ಲಿ ಕಳವು ಪ್ರಕರಣ

ಬಂಧಿತ 20 ವರ್ಷದ ರವಿಕುಮಾರ್ ಕೇವಲ ಕಿರಿಯ ವಯಸ್ಸಿನವನಾಗಿದ್ದರೂ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಖತರ್ನಾಕ್ ಕಳ್ಳನೆಂದು ತಿಳಿದುಬಂದಿದೆ. ಈತನ ವಿರುದ್ಧ ಈಗಾಗಲೇ 2024ರಲ್ಲಿ ಬೆಂಗಳೂರಿನ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐದು ಪ್ರತ್ಯೇಕ ಕಳವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.



image