ಮಣಿಪಾಲ: ಸ್ನೇಹಿತರ ಜೊತೆ ರಾತ್ರಿ ಊಟ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಯುವಕನೊಬ್ಬ, ಚಾಲಕನ ನಿಯಂತ್ರಣ ತಪ್ಪಿ ಬೈಕ್ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ದಾರುಣವಾಗಿ ಮೃತಪಟ್ಟ ಘಟನೆ ಮಂಗಳವಾರ ನಸುಕಿನ ವೇಳೆಯಲ್ಲಿ ಹೆರ್ಗ ಗ್ರಾಮದ ಕೆಳಪರ್ಕಳ ಇಳಿಜಾರಿನ ಗೋಪಾಲಕೃಷ್ಣ ದೇವಸ್ಥಾನದ ಬಳಿ ನಡೆದಿದೆ.
ಆತ್ರಾಡಿ ನಿವಾಸಿ ಸನತ್ (21) ಮೃತಪಟ್ಟ ದುರ್ದೈವಿ.
ಘಟನೆಯ ವಿವರ:
ಸನತ್ ಅವರು ತಮ್ಮ ಸ್ನೇಹಿತರೊಂದಿಗೆ ಮಣಿಪಾಲದಲ್ಲಿ ರಾತ್ರಿ ಊಟ ಮುಗಿಸಿ, ಆಶಿಶ್ ಎಂಬುವರ ದ್ವಿಚಕ್ರ ವಾಹನದಲ್ಲಿ ಮನೆಗೆ ಮರಳುತ್ತಿದ್ದರು. ಮಂಗಳವಾರ ನಸುಕಿನ ಸುಮಾರು 1:25 ರ ವೇಳೆಗೆ ಮಣಿಪಾಲದಿಂದ ಪರ್ಕಳ ಮಾರ್ಗವಾಗಿ ತೆರಳುತ್ತಿದ್ದಾಗ, ಕೆಳಪರ್ಕಳದ ಇಳಿಜಾರು ರಸ್ತೆಯಲ್ಲಿ ಅತಿಯಾದ ವೇಗ ಹಾಗೂ ಚಾಲಕನ ಅಜಾಗರೂಕತೆಯಿಂದಾಗಿ ವಾಹನ ನಿಯಂತ್ರಣ ತಪ್ಪಿದೆ.
ಈ ವೇಳೆ ರಸ್ತೆ ಬದಿಯ ಮರಕ್ಕೆ ಬೈಕ್ ಬಲವಾಗಿ ಢಿಕ್ಕಿ ಹೊಡೆದಿದ್ದು, ರಭಸಕ್ಕೆ ಸನತ್ ಅವರು ವಾಹನದ ಸಮೇತ ಪಕ್ಕದ ಚರಂಡಿಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಹಾಗೂ ತನಿಖೆ ಮುಂದುವರಿಸಿದ್ದಾರೆ.
