ಉಡುಪಿ: ನೀವು ಮಾರುಕಟ್ಟೆಯಲ್ಲಿ ಆಕರ್ಷಕವಾಗಿ ಕಾಣುವ ಬಾಳೆಹಣ್ಣುಗಳನ್ನು ಖರೀದಿಸುವ ಮುನ್ನ ತುಸು ಎಚ್ಚರವಹಿಸುವುದು ಅಗತ್ಯ. ಜಿಲ್ಲೆಯಲ್ಲಿ ಕೃತಕವಾಗಿ ಹಾಗೂ ಹಾನಿಕಾರಕ ರಾಸಾಯನಿಕ ಬಳಸಿ ಬಾಳೆಕಾಯಿಗಳನ್ನು ಹಣ್ಣು ಮಾಡುತ್ತಿದ್ದ ಬೃಹತ್ ದಂಧೆಯನ್ನು ಉಡುಪಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಜಂಟಿ ಕಾರ್ಯಾಚರಣೆ ಮೂಲಕ ಬಯಲಿಗೆಳೆದಿದೆ.
ಆಗಸ್ಟ್ 20ರಂದು ಉಡುಪಿ ಸಹಾಯಕ ಕಮಿಷನರ್ (ಎಸಿ) ರಶ್ಮಿ ಎಸ್.ಆರ್. ಹಾಗೂ ಆರೋಗ್ಯ ಅಧಿಕಾರಿಗಳನ್ನೊಳಗೊಂಡ ವಿಚಕ್ಷಣಾ ತಂಡವು ತಾಲೂಕಿನ ಪ್ರಮುಖ ಬಾಳೆಹಣ್ಣಿನ ಗೋದಾಮುಗಳ ಮೇಲೆ ಏಕಕಾಲಕ್ಕೆ ದಿಢೀರ್ ದಾಳಿ ನಡೆಸಿತು. ಅಲೆವೂರು ಗ್ರಾಮದ ಕೆಸ್ತೂರು ಹಾಗೂ ಮಣಿಪಾಲ ಸಮೀಪದ ದುಗ್ಗಿ ಪರಿಸರದಲ್ಲಿದ್ದ ಮೂರು ಪ್ರಮುಖ ದಾಸ್ತಾನು ಮಳಿಗೆಗಳಲ್ಲಿ ಈ ಪರಿಶೀಲನೆ ನಡೆಯಿತು.
ಕೃತಕ ಬಣ್ಣ, ಅಪಾಯಕಾರಿ ರಾಸಾಯನಿಕ ಜಪ್ತಿ
ದಾಳಿಯ ವೇಳೆ, ಗ್ರಾಹಕರನ್ನು ಆಕರ್ಷಿಸಲು ಬಾಳೆಕಾಯಿಗಳಿಗೆ ವಿಷಕಾರಿ ಕೃತಕ ಬಣ್ಣ ಬಳಿಯುತ್ತಿರುವುದು ಹಾಗೂ ಶೀಘ್ರವಾಗಿ ಹಣ್ಣಾಗಿಸಲು ನಿಷೇಧಿತ ಕೆಮಿಕಲ್ ಬಳಸುತ್ತಿದ್ದುದು ಸಾಕ್ಷಿ ಸಮೇತ ಪತ್ತೆಯಾಗಿದೆ. ಸ್ಥಳದಲ್ಲಿದ್ದ ಹಾನಿಕಾರಕ ರಾಸಾಯನಿಕಗಳು, ಬಣ್ಣ ಬಳಿಯಲು ಉಪಯೋಗಿಸುತ್ತಿದ್ದ ಪರಿಕರಗಳು ಹಾಗೂ ಈ ಕೃತ್ಯಕ್ಕೆ ಬಳಸಲಾಗುತ್ತಿದ್ದ ವಾಹನಗಳನ್ನು ಅಧಿಕಾರಿಗಳು ತಕ್ಷಣವೇ ಜಪ್ತಿ ಮಾಡಿದ್ದಾರೆ.
ಸಾರ್ವಜನಿಕರ ಆರೋಗ್ಯದ ಜೊತೆ ಆಟವಾಡುತ್ತಿರುವ ಇಂತಹ ಅಕ್ರಮ ದಂಧೆಕೋರರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸುವುದಾಗಿ ಅಧಿಕಾರಿಗಳು ಎಚ್ಚರಿಸಿದ್ದಾರೆ. ಕೃತಕವಾಗಿ ಹಣ್ಣು ಮಾಡಿದ ಹಣ್ಣುಗಳನ್ನು ಸೇವಿಸುವುದರಿಂದ ತೀವ್ರ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಹಣ್ಣುಗಳನ್ನು ಖರೀದಿಸುವಾಗ ಸೂಕ್ತ ಜಾಗರೂಕತೆ ವಹಿಸಬೇಕಿದೆ.

