ಬೆಂಗಳೂರು: ಜೀ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ಸಂಗೀತ ರಿಯಾಲಿಟಿ ಶೋ 'ಸರಿಗಮಪ ಲಿಟಲ್ ಚಾಂಪ್ಸ್' ಮಹಾಸಂಗ್ರಾಮಕ್ಕೆ ಅದ್ದೂರಿ ತೆರೆ ಬಿದ್ದಿದೆ. ಈ ಬಾರಿಯ ಕಾದಾಟದಲ್ಲಿ ಕರಾವಳಿಯ ಪ್ರತಿಭೆಗಳು ಮೇಲುಗೈ ಸಾಧಿಸಿದ್ದು, ಮಂಗಳೂರಿನ ಅಶ್ಮಿತ್ ವಿಜೇತರಾಗಿ ಹೊರಹೊಮ್ಮಿದ್ದಾರೆ.
ಮಹಾಸಂಗ್ರಾಮದ ಅಂತಿಮ ಸುತ್ತಿಗೆ ಅರ್ಹತೆ ಪಡೆದಿದ್ದ ಆರು ಬಾಲಪ್ರತಿಭೆಗಳ ನಡುವೆ ಕಠಿಣ ಪೈಪೋಟಿ ಏರ್ಪಟ್ಟಿತ್ತು. ಅದ್ಭುತ ಗಾಯನದ ಜತೆಗೆ ವಯೊಲಿನ್ ವಾದನದಲ್ಲೂ ಪ್ರೇಕ್ಷಕರನ್ನು ಹಾಗೂ ತೀರ್ಪುಗಾರರನ್ನು ಮಂತ್ರಮುಗ್ಧಗೊಳಿಸಿದ ಅಶ್ಮಿತ್, ಅಂತಿಮವಾಗಿ 'ಸರಿಗಮಪ' ಟ್ರೋಫಿಯನ್ನು ತಮ್ಮದಾಗಿಸಿಕೊಂಡರು. ಪ್ರಸಿದ್ಧ ಗಾಯಕಿ ಇಂದು ನಾಗರಾಜ್ ಅವರ ಮಾರ್ಗದರ್ಶನದಲ್ಲಿ ಬೆಳೆದ ಅಶ್ಮಿತ್‌ಗೆ ಕಿರೀಟದ ಜೊತೆಗೆ ಬರೋಬ್ಬರಿ 20 ಲಕ್ಷ ರೂಪಾಯಿ ನಗದು ಬಹುಮಾನ ಲಭಿಸಿದೆ.
ಪ್ರಥಮ ರನ್ನರ್ ಅಪ್ ಅಚಿಂತ್ಯ ರೈ
ವಿನ್ನರ್ ಅಶ್ಮಿತ್‌ಗೆ ಅಂತಿಮ ಹಂತದವರೆಗೆ ತೀವ್ರ ಪೈಪೋಟಿ ನೀಡಿದ ಮಂಗಳೂರಿನ ಮತ್ತೊಬ್ಬ ಪ್ರತಿಭಾವಂತ ಗಾಯಕ ಅಚಿಂತ್ಯ ರೈ ಮೊದಲ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದ್ದಾರೆ. ರೋಚಕವಾಗಿ ನಡೆದ ಫಿನಾಲೆಯಲ್ಲಿ ಕಣ್ಮನ ಸೆಳೆಯುವ ಪ್ರದರ್ಶನ ನೀಡಿದ ಅಚಿಂತ್ಯ, ಟ್ರೋಫಿಯೊಂದಿಗೆ 15 ಲಕ್ಷ ರೂಪಾಯಿ ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಒಂದೇ ಆವೃತ್ತಿಯ ಪ್ರಮುಖ ಎರಡೂ ಉನ್ನತ ಸ್ಥಾನಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಮಂಗಳೂರಿನ ಬಾಲಪ್ರತಿಭೆಗಳು ಈ ಬಾರಿಯ 'ಸರಿಗಮಪ' ವೇದಿಕೆಯಲ್ಲಿ 'ಡಬಲ್ ಧಮಾಕಾ' ಸೃಷ್ಟಿಸಿ ಇತಿಹಾಸ ಬರೆದಿದ್ದಾರೆ.

