ರಾಜ್ಯ

ಬೆಂಗಳೂರು : ಮತದಾರರ ಪಟ್ಟಿಯಿಂದ ನಟ ಪ್ರಕಾಶ್ ರೈ ಹೆಸರು ಹೊರಕ್ಕೆ: ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ ನಟ

 


ಬೆಂಗಳೂರು:ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ, ಖ್ಯಾತ ನಟ ಪ್ರಕಾಶ್ ರೈ (ಪ್ರಕಾಶ್ ರಾಜ್) ಅವರಿಗೆ ಚುನಾವಣಾ ಆಯೋಗದಿಂದ ಆಘಾತ ಎದುರಾಗಿದೆ. ಬೆಂಗಳೂರಿನ ಮತದಾರರ ಪಟ್ಟಿಯಿಂದ ಅವರ ಹೆಸರನ್ನು ತೆರವುಗೊಳಿಸಲಾಗಿದ್ದು, ಈ ವಿಚಾರವಾಗಿ ನಟ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮತದಾನದ ಹಕ್ಕು ಕಳೆದುಕೊಂಡ ನಟನ ಆಕ್ರೋಶ

ವೀಡಿಯೊ ಸಂದೇಶದಲ್ಲಿ ಮಾತನಾಡಿದ ಅವರು, "ಎಸ್‌ಐಆರ್‌ ಪ್ರಕ್ರಿಯೆಯ ನಂತರ ಬೆಂಗಳೂರಿನಲ್ಲಿ ಮತದಾನದ ಹಕ್ಕು ಕಳೆದುಕೊಂಡಿರುವ ಸುಮಾರು 65 ಲಕ್ಷ ಜನರ ಸಾಲಿನಲ್ಲಿ ನಾನೂ ಒಬ್ಬನಾಗಿದ್ದೇನೆ" ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. "ನಾನು ಹುಟ್ಟಿದ್ದು, ಬೆಳೆದಿದ್ದು, ವಿದ್ಯಾಭ್ಯಾಸ ಮಾಡಿದ್ದು ಹಾಗೂ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು ಇದೇ ಕ್ಷೇತ್ರದಲ್ಲಿ. ಅಷ್ಟೇ ಅಲ್ಲದೆ, ಇದೇ ಲೋಕಸಭಾ ಕ್ಷೇತ್ರದಿಂದ ನಾನು ಸ್ಪರ್ಧೆಯನ್ನೂ ಮಾಡಿದ್ದೆ. ಹೀಗಿದ್ದರೂ ನನ್ನ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ" ಎಂದು ಬೇಸರ ಹೊರಹಾಕಿದ್ದಾರೆ.

​ತಮ್ಮ ಮತದಾರರ ಗುರುತಿನ ಚೀಟಿಯನ್ನು ಪುನಃ ಪಡೆಯಲು ಅಗತ್ಯವಿರುವ ಕಾನೂನು ಹಾಗೂ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಅನುಸರಿಸುವುದಾಗಿ ತಿಳಿಸಿರುವ ಅವರು, "ತಮಗೆ ಮತ ಬೀಳುವುದಿಲ್ಲ ಎಂಬ ಕಾರಣಕ್ಕೆ ಅಧಿಕಾರ ಬಳಸಿ ನಾಗರಿಕರ ಹಕ್ಕನ್ನು ಕಸಿಯಬಹುದು. ಆದರೆ, ಅಂತಿಮವಾಗಿ ಜನರೇ ಅಧಿಕಾರದಲ್ಲಿರುವವರನ್ನು ಕೆಳಗಿಳಿಸುವ ಶಕ್ತಿ ಹೊಂದಿದ್ದಾರೆ" ಎಂದು ಎಚ್ಚರಿಸಿದ್ದಾರೆ.

ಅಭ್ಯರ್ಥಿಗಳ ಮೇಲಿನ ಪೊಲೀಸ್ ಕ್ರಮಕ್ಕೆ ಖಂಡನೆ

ಇದೇ ವೇಳೆ, ಜಾರ್ಖಂಡ್‌ನ ರಾಂಚಿಯಲ್ಲಿ ವಿಧಾನಸಭೆ ಸಮೀಪ ಪ್ರತಿಭಟನೆ ನಡೆಸುತ್ತಿದ್ದ JPSC ಹಾಗೂ JSSC ಪರೀಕ್ಷಾ ಆಕಾಂಕ್ಷಿಗಳ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಜ್ ಮತ್ತು ಅಶ್ರುವಾಯು ಪ್ರಯೋಗದ ಘಟನೆಯನ್ನೂ ಪ್ರಕಾಶ್ ರೈ ಖಂಡಿಸಿದ್ದಾರೆ. ಘಟನೆಯ ವೀಡಿಯೊವನ್ನು ಶೇರ್ ಮಾಡಿ, "ಈ ರೀತಿಯ ಕ್ರೌರ್ಯವನ್ನು ಸಹಿಸಲು ಸಾಧ್ಯವಿಲ್ಲ. ದುರಹಂಕಾರದ ಆಡಳಿತವನ್ನು ಜನರು ಶೀಘ್ರದಲ್ಲೇ ಮನೆಗೆ ಕಳುಹಿಸಲಿದ್ದಾರೆ" ಎಂದು ಆಕ್ರೋಶ ಹೊರಹಾಕಿದ್ದಾರೆ.

ಚುನಾವಣಾ ಆಯೋಗದ ಸೂಚನೆ:

ಪ್ರಸ್ತುತ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಭರದಿಂದ ಸಾಗುತ್ತಿದ್ದು, ಹೆಸರು ಬಿಟ್ಟುಹೋಗಿರುವ ಅಥವಾ ವಿವರಗಳಲ್ಲಿ ಲೋಪಗಳಿರುವ ನಾಗರಿಕರು ತಕ್ಷಣವೇ ಅಗತ್ಯ ದಾಖಲೆಗಳನ್ನು ಸಲ್ಲಿಸಿ, ಪರಿಶೀಲನೆ ನಡೆಸಿ ತಮ್ಮ ಹೆಸರನ್ನು ಮರು ಸೇರ್ಪಡೆ ಮಾಡಿಕೊಳ್ಳುವಂತೆ ಅಧಿಕಾರಿಗಳು ತಿಳಿಸಿದ್ದಾರೆ.





image