ರಾಜ್ಯ

ಬೆಳಗಾವಿ : ಗೋಕಾಕ್‌ನಲ್ಲಿ ಭೀಕರ ರಸ್ತೆ ಅಪಘಾತ: ಸಾರಿಗೆ ಬಸ್ ಡಿಕ್ಕಿಯಾಗಿ ಮಗು ಸೇರಿ ಮೂವರು ದುರ್ಮರಣ

 


ಬೆಳಗಾವಿ: ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರು ಪಟ್ಟಣದಲ್ಲಿ ಸಾರಿಗೆ ಸಂಸ್ಥೆಯ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಕ್ರೂರ ಅಪಘಾತದಲ್ಲಿ ನಾಲ್ಕು ವರ್ಷದ ಪುಟಾಣಿ ಸೇರಿದಂತೆ ಒಂದೇ ಕುಟುಂಬದ ಇಬ್ಬರು ಹಾಗೂ ಅವರ ಸ್ನೇಹಿತ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

​ಕೊಣ್ಣೂರು ನಿವಾಸಿ ಸೈಫ್ ಮುಲ್ಲಾ (29), ಅವರ ನಾಲ್ಕು ವರ್ಷದ ಪುತ್ರಿ ಸಿಜಾ ಸೈಫ್ ಮುಲ್ಲಾ ಹಾಗೂ ಇವರ ಆಪ್ತ ಸ್ನೇಹಿತ ಇಮ್ತಿಯಾಜ್ ಬಡಗಾಂವ್ (35) ಮೃತಪಟ್ಟ ದೈವಹೀನರು.

ಅಪಘಾತ ನಡೆದಿದ್ದು ಹೇಗೆ?

ಹಿಡಕಲ್‌ನಿಂದ ಗೋಕಾಕ್ ನಗರದ ಕಡೆಗೆ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಗೋಕಾಕ್ ಫಾಲ್ಸ್‌ ಕಡೆಯಿಂದ ಕೊಣ್ಣೂರಿನತ್ತ ಬೈಕ್‌ನಲ್ಲಿ ತಂದೆ, ಪುತ್ರಿ ಮತ್ತು ಸ್ನೇಹಿತ ತೆರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಕೊಣ್ಣೂರು ಪಟ್ಟಣದ ಪ್ರಸಿದ್ಧ ಕರೆಮ್ಮಾ ದೇವಸ್ಥಾನದ ಸಮೀಪ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಢಿಕ್ಕಿಯಾಗಿದೆ. ಡಿಕ್ಕಿಯ ತೀವ್ರತೆಗೆ ಬೈಕ್‌ನಲ್ಲಿದ್ದ ಮೂವರೂ ರಸ್ತೆಗೆ ಎಸೆಯಲ್ಪಟ್ಟು, ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಚಾಲಕ ಪರಾರಿ, ದೂರು ದಾಖಲು:

ಅಪಘಾತ ಸಂಭವಿಸುತ್ತಿದ್ದಂತೆ ಸಾರಿಗೆ ಬಸ್ ಚಾಲಕ ವಾಹನವನ್ನು ರಸ್ತೆಯಲ್ಲೇ ಬಿಟ್ಟು ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಘಟನೆಯ ಮಾಹಿತಿ ಲಭಿಸುತ್ತಿದ್ದಂತೆ ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಗೋಕಾಕ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.



image