ಮೂಡುಬಿದಿರೆ: ಸಂಗೀತದಲ್ಲಿ ಶ್ರುತಿ ತಪ್ಪಿದರೆ ಗಾಯನ ಅಪಸ್ವರವಾಗುವಂತೆ, ವಿದ್ಯಾರ್ಥಿ ಜೀವನಕ್ಕೂ ಸರಿಯಾದ ಶ್ರುತಿ, ಲಯ ಹಾಗೂ ಸ್ಪಷ್ಟ ದಿಕ್ಸೂಚಿ ಅತ್ಯಗತ್ಯ. ಜ್ಞಾನ, ಶಿಸ್ತು ಮತ್ತು ಮೌಲ್ಯಗಳ ಮೂಲಕ ಮಕ್ಕಳ ಬದುಕನ್ನು ಶ್ರುತಿಬದ್ಧಗೊಳಿಸುವುದೇ ನಿಜವಾದ ಶಿಕ್ಷಣ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿನ ಕೃಷಿಸಿರಿ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಪಾಲಕ–ಶಿಕ್ಷಕ ಸಮಾವೇಷವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವಿದ್ಯಾರ್ಥಿಯ ಸರ್ವಾಂಗೀಣ ಪ್ರಗತಿಯಲ್ಲಿ ಶಿಕ್ಷಣ ಸಂಸ್ಥೆಯಷ್ಟೇ ಪಾಲಕರ ಪಾತ್ರವೂ ಹಿರಿದು. ಪಿಯುಸಿ ಹಂತವು ಶೈಕ್ಷಣಿಕ ಜೀವನದ ಪ್ರಮುಖ ತಿರುವು. ಈ ಸಮಯದಲ್ಲಿ ವಿದ್ಯಾರ್ಥಿಗಳು, ಪಾಲಕರು ಮತ್ತು ಶಿಕ್ಷಕರು ಒಂದಾಗಿ ಶ್ರಮಿಸಿದಾಗ ಮಾತ್ರ ಉತ್ತಮ ಸಾಧನೆ ಸಾಧ್ಯ. ಕೇವಲ ಅಂಕಗಳನ್ನಷ್ಟೇ ಮಾನದಂಡವನ್ನಾಗಿ ಮಾಡಿಕೊಳ್ಳದೆ, ಮಕ್ಕಳ ಆಸಕ್ತಿ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಪಾಲಕರು ಬೆಂಬಲ ನೀಡಬೇಕು ಎಂದು ಅವರು ಕರೆ ನೀಡಿದರು.
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ
ಆಳ್ವಾಸ್ ಪದವಿಪೂರ್ವ ಕಾಲೇಜಿನಲ್ಲಿ ಒಟ್ಟು 16 ವಿಭಾಗಗಳಲ್ಲಿ ಸಮಗ್ರ ಶಿಕ್ಷಣ ಒದಗಿಸಲಾಗುತ್ತಿದೆ. ಎನ್‌ಸಿಇಆರ್‌ಟಿ (NCERT) ಪಠ್ಯಕ್ರಮದೊಂದಿಗೆ ಸಿಇಟಿ, ನೀಟ್, ನಾಟಾ, ಎನ್‌ಡಿಎ, ಸಿಎ, ಸಿಎಸ್, ಯುಪಿಎಸ್ಸಿ ಹಾಗೂ ಕ್ಲಾಟ್ ಸೇರಿದಂತೆ ವಿವಿಧ ಪ್ರವೇಶ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕ ತರಬೇತಿ ನೀಡಲಾಗುತ್ತಿದೆ.
₹28.62 ಕೋಟಿ ವಿದ್ಯಾರ್ಥಿವೇತನ
ಬಡತನ ಅಥವಾ ಆರ್ಥಿಕ ಸಂಕಷ್ಟ ಶಿಕ್ಷಣಕ್ಕೆ ತೊಡಕಾಗಬಾರದು ಎಂಬ ಉದ್ಧೇಶದಿಂದ ಆಳ್ವಾಸ್ ಸಂಸ್ಥೆಯು ಪ್ರತಿವರ್ಷ ₹70 ರಿಂದ ₹80 ಕೋಟಿ ಮೊತ್ತವನ್ನು ಶೈಕ್ಷಣಿಕ ನೆರವಿಗಾಗಿ ವಿನಿಯೋಗಿಸುತ್ತಿದೆ. ಇದರಲ್ಲಿ ಕೇವಲ ಪದವಿಪೂರ್ವ ವಿಭಾಗದ ವಿದ್ಯಾರ್ಥಿಗಳಿಗಾಗಿಯೇ ₹28.62 ಕೋಟಿ ವಿದ್ಯಾರ್ಥಿವೇತನ ನೀಡಲಾಗುತ್ತಿದೆ ಎಂದು ಡಾ. ಆಳ್ವ ತಿಳಿಸಿದರು.
ಸಂಸ್ಥೆಯ ಕ್ಯಾಂಪಸ್‌ನಲ್ಲಿ ದೇಶದ ನಾನಾ ರಾಜ್ಯಗಳ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಇಲ್ಲಿ 'ಮಿನಿ ಇಂಡಿಯಾ' ವಾತಾವರಣವಿದೆ. ಇದು ಮಕ್ಕಳಲ್ಲಿ ಸಹಬಾಳ್ವೆ ಮತ್ತು ವಿಶಾಲ ಮನೋಭಾವವನ್ನು ಬೆಳೆಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವಿಜ್ಞಾನ ವಿಭಾಗದ 2,219 ವಿದ್ಯಾರ್ಥಿಗಳ ಪಾಲಕರು, ಬೋಧಕ ಸಿಬ್ಬಂದಿ, ಕಾಲೇಜಿನ ಪ್ರಾಂಶುಪಾಲ ಮೊಹಮ್ಮದ್ ಸದಾಕತ್ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


