ಕ್ರೈಂ

ಮಂಗಳೂರು : 6 ವರ್ಷಗಳಿಂದ ವಿದೇಶದಲ್ಲಿದ್ದ ವಾರೆಂಟ್ ಆರೋಪಿ ಮಂಗಳೂರು ಏರ್‌ಪೋರ್ಟ್‌ನಲ್ಲಿ ಬಂಧನ!



ಮಂಗಳೂರು: ಕಳೆದ 6 ವರ್ಷಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಲೂಕ್ ಔಟ್ ವಾರೆಂಟ್ ಆರೋಪಿಯೊಬ್ಬನನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಟ್ವಾಳ ನಗರ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.

​ಬಂಧಿತ ಆರೋಪಿಯನ್ನು ಮಂಗಳೂರು ಬಜಾಲ್-ನಂತೂರು ಮೂಲದ ಮಹಮ್ಮದ್ ನೌಫಲ್ ಅಲಿಯಾಸ್ ಸಫಾರಿ ನೌಫಲ್ (34) ಎಂದು ಗುರುತಿಸಲಾಗಿದೆ.

​ಪ್ರಕರಣದ ಹಿನ್ನೆಲೆ:

2020ರಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಗಲಭೆ, ಹಲ್ಲೆ, ಸಾರ್ವಜನಿಕ ಮತ್ತು ಖಾಸಗಿ ಆಸ್ತಿಪಾಸ್ತಿಗೆ ಹಾನಿ ಎಸಗಿದ ಆರೋಪದಡಿ (IPC ಕಲಂ 143, 147, 148, 504, 323, 324, 506, 427 ಹಾಗೂ ಪಿಡಿಎಲ್‌ಪಿ ಕಾಯ್ದೆ) ಸರಣಿ ಪ್ರಕರಣಗಳು ದಾಖಲಾಗಿದ್ದವು. ಪ್ರಕರಣದ ತನಿಖೆ ಹಾಗೂ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಆರೋಪಿ ವಿದೇಶಕ್ಕೆ ಪರಾರಿಯಾಗಿದ್ದ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ನ್ಯಾಯಾಲಯವು ವಾರೆಂಟ್ ಹೊರಡಿಸಿತ್ತು.

​ಏರ್‌ಪೋರ್ಟ್‌ನಲ್ಲಿ ಇಮಿಗ್ರೇಷನ್ ಬಲೆ:

ಸೆಪ್ಟೆಂಬರ್ 15ರಂದು ಆರೋಪಿ ವಿದೇಶದಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಸುಳಿವು ಪಡೆದ ಬಂಟ್ವಾಳ ಪೊಲೀಸರು, ವಿಮಾನ ನಿಲ್ದಾಣದ ಇಮಿಗ್ರೇಷನ್ ವಿಭಾಗದ ಅಧಿಕಾರಿಗಳ ಸಹಕಾರದೊಂದಿಗೆ ಆತನನ್ನು ವಶಕ್ಕೆ ಪಡೆದರು.

​ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಸೆಪ್ಟೆಂಬರ್ 29ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದ್ದಾರೆ.



image