ಬೆಳ್ತಂಗಡಿ:ತಾಲೂಕಿನ ಬಂದಾರು ಗ್ರಾಮದ ಮೈರೋಳ್ತಡ್ಕ ವಠಾರದಲ್ಲಿ ಶಿವಗೆಳೆಯರ ಬಳಗ (ರಿ.) ಹಾಗೂ ನವ್ಯಶ್ರೀ ಯುವತಿ ಮಂಡಲ (ರಿ.) ಇವುಗಳ ಸಂಯುಕ್ತ ಆಶ್ರಯದಲ್ಲಿ 31ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆಪ್ಟೆಂಬರ್ 14ರಂದು ಅತ್ಯಂತ ಶ್ರದ್ಧಾ-ಭಕ್ತಿಯಿಂದ ನೆರವೇರಿತು.
ಈ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬೆಳ್ತಂಗಡಿ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜಾರವರು ಭೇಟಿ ನೀಡಿ, ಶ್ರೀ ದೇವರ ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಉತ್ಸವ ಸಮಿತಿಯ ವತಿಯಿಂದ ಶಾಸಕರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.
ಬೆಳಗ್ಗೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ಗಣಹೋಮದೊಂದಿಗೆ ಧಾರ್ಮಿಕ ವಿಧಿವಿಧಾನಗಳು ಪ್ರಾರಂಭಗೊಂಡವು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು.
ದಿನವಿಡೀ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದು, ಪಾಂಚಜನ್ಯ ಗೆಳೆಯರ ಬಳಗ ಪಾಂಜಾಳ ಹಾಗೂ ಶ್ರೀ ಸದಾಶಿವ ಭಜನಾ ಮಂಡಳಿ ಕುರಾಯ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಸಂಜೆ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಲಕ್ಕಿಡಿಪ್ ಡ್ರಾ ಕಾರ್ಯಕ್ರಮಗಳು ನಡೆದವು. ತರುವಾಯ, ಭಾರತ ಮಾತೆಯ ಭಾವಚಿತ್ರ, ಮಕ್ಕಳ ಕುಣಿತ ಭಜನೆ ಹಾಗೂ ಆಕರ್ಷಕ ಚೆಂಡೆ ವಾದ್ಯಗಳೊಂದಿಗೆ ವೈಭವಪೂರ್ಣ ಶೋಭಾಯಾತ್ರೆ ಜರುಗಿತು. ಮಾರ್ಗದ ಇಕ್ಕೆಲಗಳಲ್ಲಿ ಪೂಜೆ, ಸಿಹಿತಿಂಡಿ ಹಾಗೂ ಪಾನೀಯ ವಿತರಣೆ ವ್ಯವಸ್ಥೆ ಮಾಡಲಾಗಿತ್ತು. ಅಂತಿಮವಾಗಿ ಮುಗೇರಡ್ಕದ ನೇತ್ರಾವತಿ ನದಿಯಲ್ಲಿ ಜಲಸ್ತಂಭನದೊಂದಿಗೆ 31ನೇ ವರ್ಷದ ಗಣೇಶೋತ್ಸವ ಸಂಪನ್ನಗೊಂಡಿತು.
ಛತ್ರಪತಿ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ:
ಗಣೇಶೋತ್ಸವ ಕಾರ್ಯಕ್ರಮದ ಅಂಗವಾಗಿ, ಶಿವಾಜಿ ಫ್ರೆಂಡ್ಸ್ ನೇತೃತ್ವದಲ್ಲಿ ಶಿವನಗರ ಸರ್ಕಲ್ ಬಳಿ ಇರುವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಶಾಸಕ ಹರೀಶ್ ಪೂಂಜಾರವರು ಮಾಲಾರ್ಪಣೆ ಮಾಡಿ ಪುಷ್ಪಾರ್ಚನೆ ಸಲ್ಲಿಸಿದರು.
ಹಲವು ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್, ಶ್ರೀದೇವಿ ಪ್ರತಿಷ್ಠಾನದ ಅಧ್ಯಕ್ಷ ಕಿರಣ್ ಚಂದ್ರ ಪುಷ್ಪಗಿರಿ, ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಕ್ಷಿತ್ ಪಣೆಕ್ಕರ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.
ಸಮಾರಂಭದಲ್ಲಿ ಶಿವಗೆಳೆಯರ ಬಳಗದ ಅಧ್ಯಕ್ಷ ಜಗದೀಶ್ ಗೌಡ ಕೊಂಬೇಡಿ, ಉಪಾಧ್ಯಕ್ಷ ದಾಮೋದರ ಗೌಡ ಚಾಕೋಟೆದಡಿ, ಕಾರ್ಯದರ್ಶಿ ಚೇತನ್ ಗೌಡ ಕುರಿಯಾಳ, ಜೊತೆ ಕಾರ್ಯದರ್ಶಿ ಚಿದಾನಂದ ಗೌಡ ಪಾಂಜಾಳ, ಕೋಶಾಧಿಕಾರಿ ಬಾಲಕೃಷ್ಣ ಗೌಡ ಕೊಳ್ಳಕೋಡಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮದ ಹಿರಿಯರು ಮತ್ತು ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದರು.