
ಒಡಿಯೂರು (ದಕ್ಷಿಣ ಕನ್ನಡ):ಆಧ್ಯಾತ್ಮಿಕ ಚಿಂತನೆಯ ತಳಹದಿಯಲ್ಲಿ ಸಮಾಜಕ್ಕೆ ಸಲ್ಲಿಸುವ ನಿಸ್ವಾರ್ಥ ಸೇವೆಯು ಸದಾ ಯಶಸ್ಸನ್ನು ತಂದುಕೊಡುತ್ತದೆ. ಸತ್ಕರ್ಮಗಳು ಮತ್ತು ಉಪಕಾರದ ಭಾವನೆಯಿಂದ ಮಾಡುವ ಕೆಲಸಗಳು ಸಮಾಜದ ಏಳಿಗೆಗೆ ಪೂರಕವಾಗಿದ್ದು, 'ವಿಕಸಿತ ಭಾರತ'ದ ಕಲ್ಪನೆಗೆ ನಿಜವಾದ ಅಡಿಪಾಯ ಗ್ರಾಮಗಳ ವಿಕಾಸದಿಂದಲೇ ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಪ್ರತಿಪಾದಿಸಿದರು.
ಅವರು ಒಡಿಯೂರಿನ ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾಂಗಣದಲ್ಲಿ ನಡೆದ 'ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ'ಯ ರಜತ ಸಂಭ್ರಮ ಹಾಗೂ 'ಒಡಿಯೂರು ಶ್ರೀ ವಿಕಾಸವಾಹಿನಿ ಸಂಗಮ' ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ನೆರಳು ನೀಡುವ ಮರವಾದ ಗ್ರಾಮ ವಿಕಾಸ ಯೋಜನೆ
"ಕಳೆದ 25 ವರ್ಷಗಳ ಹಿಂದೆ ಆರಂಭಗೊಂಡ ಗ್ರಾಮ ವಿಕಾಸ ಯೋಜನೆ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಇದರ ಹಿಂದೆ ಅನೇಕ ನಾಯಕರ, ಕಾರ್ಯಕರ್ತರ ಪರಿಶ್ರಮ ಮತ್ತು ತ್ಯಾಗ ಅಡಗಿದೆ. ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಸಹಭಾಗಿತ್ವದೊಂದಿಗೆ ಈ ಯೋಜನೆ ಬೆಳೆದು, ಇಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಗ್ರಾಮೀಣ ಭಾಗಗಳಲ್ಲಿ ಮನೆಮಾತಾಗಿದೆ" ಎಂದು ಸ್ವಾಮೀಜಿ ಹರ್ಷ ವ್ಯಕ್ತಪಡಿಸಿದರು.
ತುಳು ಭಾಷೆಗೆ ಆಡಳಿತ ಭಾಷೆ ಮಾನ್ಯತೆ: ಸರ್ಕಾರದ ನಿರ್ಧಾರಕ್ಕೆ ಅಭಿನಂದನೆ
ಕಾರ್ಯಕ್ರಮದಲ್ಲಿ ತುಳು ಭಾಷೆಯ ವಿಷಯವನ್ನು ಉಲ್ಲೇಖಿಸಿದ ಸ್ವಾಮೀಜಿಯವರು, "ಸುಮಾರು ಎರಡೂವರೆ ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿರುವ ತುಳು ಭಾಷೆಗೆ ಕರ್ನಾಟಕದ ಎರಡನೇ ಆಡಳಿತ ಭಾಷೆಯ ಮಾನ್ಯತೆ ನೀಡಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೀಡಿರುವ ಘೋಷಣೆ ಅತ್ಯಂತ ಸಂತಸ ತಂದಿದೆ. ಇದು ತುಳುವರ ದಶಕಗಳ ಹೋರಾಟಕ್ಕೆ ಸಿಕ್ಕ ಐತಿಹಾಸಿಕ ಜಯ. ಈ ನಿರ್ಧಾರವು ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳು ಭಾಷೆ ಸೇರ್ಪಡೆಯಾಗಲು ದಾರಿ ಮಾಡಿಕೊಡಲಿದೆ" ಎಂದರು. ಕರಾವಳಿಯ ಈ ಬಹುದಿನಗಳ ಬೇಡಿಕೆಗೆ ಸ್ಪಂದಿಸಿದ ಸಚಿವರು, ಶಾಸಕರು ಹಾಗೂ ಜನಪ್ರತಿನಿಧಿಗಳಿಗೆ ಅವರು ಅಭಿನಂದನೆ ಸಲ್ಲಿಸಿದರು.
ದುರ್ಬಲ ವರ್ಗಕ್ಕೆ ಆಶಾಕಿರಣ: ಸಾಧ್ವಿ ಶ್ರೀ ಮಾತಾನಂದಮಯೀ
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಸಾಧ್ವಿ ಶ್ರೀ ಮಾತಾನಂದಮಯೀ ಅವರು, "ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯು ಸಮಾಜದ ದುರ್ಬಲ ಹಾಗೂ ಶೋಷಿತ ವರ್ಗದವರಿಗೆ ಆಶಾಕಿರಣವಾಗಿದೆ. ಇದು ಕೇವಲ ವ್ಯಕ್ತಿಯ ಆತ್ಮಕಲ್ಯಾಣ ಮಾತ್ರವಲ್ಲದೆ, ಸಮಗ್ರ ಸಮಾಜ ಕಲ್ಯಾಣಕ್ಕೆ ಶ್ರಮಿಸುತ್ತಿದೆ" ಎಂದರು.
'ರಜತ ವಿಕಾಸ' ಸ್ಮರಣ ಸಂಚಿಕೆ ಬಿಡುಗಡೆ
ಕಾರ್ಯಕ್ರಮದಲ್ಲಿ ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ ಅವರು ರಜತ ಸಂಭ್ರಮದ ವಿಶೇಷ ಸ್ಮರಣ ಸಂಚಿಕೆ 'ರಜತ ವಿಕಾಸ'ವನ್ನು ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು, ಪ್ರಧಾನಮಂತ್ರಿಯವರ ಪ್ರೇರಣೆಯ ಫಲವಾಗಿ ತುಳು ಭಾಷೆಗೆ ರಾಜ್ಯದಲ್ಲಿ ಅಧಿಕೃತ ಸ್ಥಾನಮಾನ ಸಿಗುವಂತಾಗಿದೆ ಎಂದು ಅಭಿಪ್ರಾಯಪಟ್ಟರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಜತ ಸಂಭ್ರಮ ಸಮಿತಿಯ ಅಧ್ಯಕ್ಷ ಶಶಿಧರ ಬಿ. ಶೆಟ್ಟಿ ಬರೋಡ ಮಾತನಾಡಿ, "ಕೇಂದ್ರ ಸರ್ಕಾರವು ತುಳು ಭಾಷೆಯನ್ನು ಶೀಘ್ರದಲ್ಲೇ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವಂತೆ ಜನಪ್ರತಿನಿಧಿಗಳು ಒತ್ತಡ ಹೇರಬೇಕು" ಎಂದು ಮನವಿ ಮಾಡಿದರು. ಇದೇ ವೇಳೆ ಗ್ರಾಮ ವಿಕಾಸ ಯೋಜನೆಯ 25 ವರ್ಷಗಳ ಸಾಧನೆಯನ್ನು ಬಿಂಬಿಸುವ 20 ನಿಮಿಷಗಳ ವಿಶೇಷ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.
ಸಾಧಕರಿಗೆ 'ಸಾಧನಾ ಪ್ರಶಸ್ತಿ' ಗೌರವ
ಸಾಮಾಜಿಕ ಹಾಗೂ ಸಂಘಟನಾತ್ಮಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮುಂಬೈನ ಒಡಿಯೂರು ಶ್ರೀ ಯುವ ಸೇವಾ ಬಳಗದ ಅಧ್ಯಕ್ಷ ಡಾ. ಅದಿಪ್ ಕೆ. ಶೆಟ್ಟಿ ಅವರಿಗೆ 'ಸಾಧನಾ ಪ್ರಶಸ್ತಿ' ನೀಡಿ ಗೌರವಿಸಲಾಯಿತು. ಇದರೊಂದಿಗೆ ಗ್ರಾಮ ವಿಕಾಸ ಯೋಜನೆಯ ಸಂಸ್ಥಾಪಕರು, ಸಂಚಾಲಕರು ಹಾಗೂ ಸೇವಾ ಕ್ಷೇತ್ರದಲ್ಲಿ ಶ್ರಮಿಸಿದ ಪ್ರಮುಖರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಗಣ್ಯರ ಉಪಸ್ಥಿತಿ
ಸಮಾರಂಭದಲ್ಲಿ ಶಾಸಕರಾದ ರಾಜೇಶ್ ನಾಯ್ಕ ಉಳಿಪ್ಪಾಡಿ, ಉಮಾನಾಥ ಕೋಟ್ಯಾನ್, ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ಮಾಜಿ ಸಚಿವರಾದ ಬಿ. ನಾಗರಾಜ ಶೆಟ್ಟಿ, ಬಿ. ರಮಾನಾಥ ರೈ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ. ಸಿ. ಭಂಡಾರಿ, ಮುಂಬೈ ಉದ್ಯಮಿ ವಾಮಯ್ಯ ಬಿ. ಶೆಟ್ಟಿ, ಕ್ಯಾಂಪ್ಕೋ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ, ಮುಂಬೈ ಗುರುದೇವ ಸೇವಾ ಬಳಗದ ಅಧ್ಯಕ್ಷ ದಾಮೋದರ ಎಸ್. ಶೆಟ್ಟಿ, ಪುಣೆ ಬಳಗದ ಅಧ್ಯಕ್ಷ ಪ್ರಭಾಕರ ವಿ. ಶೆಟ್ಟಿ, ಸುಗ್ಗಿ ಸುಧಾಕರ ಶೆಟ್ಟಿ ಹುಬ್ಬಳ್ಳಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ವೇದಿಕೆಯಲ್ಲಿ ರಜತ ಸಂಭ್ರಮ ಸಮಿತಿಯ ಕಾರ್ಯಾಧ್ಯಕ್ಷ, 'ಸಹಕಾರ ರತ್ನ' ಸುರೇಶ ರೈ ಎ. ಹಾಗೂ ಉಪಾಧ್ಯಕ್ಷ ಲೋಕನಾಥ ಜಿ. ಶೆಟ್ಟಿ ಉಳಿಪ್ಪಾಡಿಗುತ್ತು ಉಪಸ್ಥಿತರಿದ್ದರು.
ಗುರುದೇವ ವಿದ್ಯಾಪೀಠದ ಮುಖ್ಯ ಶಿಕ್ಷಕಿ ರೇಣುಕಾ ಎಸ್. ರೈ ಆಶಯಗೀತೆ ಹಾಡಿದರು. ಸ್ಮರಣ ಸಂಚಿಕೆಯ ಸಂಪಾದಕ ಹಾಗೂ ಹಿರಿಯ ಪತ್ರಕರ್ತ ಯಶವಂತ ವಿಟ್ಲ ಸ್ವಾಗತಿಸಿದರು. ಗ್ರಾಮ ವಿಕಾಸ ಯೋಜನೆಯ ಕಾರ್ಯನಿರ್ವಹಣಾಧಿಕಾರಿ ಮಾತೇಶ್ ಭಂಡಾರಿ ಧನ್ಯವಾದ ಸಮರ್ಪಿಸಿದರು. ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.