ದಕ್ಷಿಣ ಕನ್ನಡ

ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಆಶ್ಲೇಷ ಬಲಿ ಪೂಜಾ ಪದ್ಧತಿ ಬದಲಾವಣೆ: ಭಕ್ತರಿಂದ ತೀವ್ರ ಆಕ್ರೋಶ, ಹೋರಾಟದ ಎಚ್ಚರಿಕೆ



ಸುಬ್ರಹ್ಮಣ್ಯ: ಕರಾವಳಿಯ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಧಾರ್ಮಿಕ ಆಚರಣೆಗಳ ‘ದಿಟ್ಟಂ’ (ಪೂಜಾ ಪದ್ಧತಿಯ ನಿಬಂಧನೆ) ಬದಲಾವಣೆ ವಿರೋಧಿಸಿ ಭಕ್ತ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆಶ್ಲೇಷ ಬಲಿ ಪೂಜೆಯಲ್ಲಿ ದೀರ್ಘಕಾಲದಿಂದ ನಡೆದುಕೊಂಡು ಬಂದಿದ್ದ ಪ್ರತ್ಯೇಕ ಸಂಕಲ್ಪ ಪದ್ಧತಿಯನ್ನು ಕೈಬಿಟ್ಟು, ಸಾಮೂಹಿಕ ಸಂಕಲ್ಪ ಜಾರಿಗೆ ತಂದಿರುವುದಕ್ಕೆ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರು ಸೇರಿದಂತೆ ಪ್ರಮುಖರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

​ಏನಿದು ಆಶ್ಲೇಷ ಬಲಿ ಪೂಜೆ ಮತ್ತು ಅದರ ಮಹತ್ವ?

​ತುಳುನಾಡಿನ ಸಂಪ್ರದಾಯದಲ್ಲಿ ಬಲಿ ಎಂದರೆ ದೇವರ ವಿಶೇಷ ಆರಾಧನೆ. ನಾಗ ಸಾನಿಧ್ಯವಿರುವ ಪ್ರಮುಖ ಕ್ಷೇತ್ರಗಳಲ್ಲಿ ಆಶ್ಲೇಷ ಬಲಿ ಪೂಜೆಯನ್ನು ವಿಧಿ-ವಿಧಾನಗಳಂತೆ ನೆರವೇರಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ನಂಬಿಕೆಯಂತೆ, ಈ ಜನ್ಮದಲ್ಲಿ ಅಥವಾ ಹಿಂದಿನ ಜನ್ಮದಲ್ಲಿ ಹಾವಿಗೆ ಹಾನಿ ಮಾಡಿದ್ದರೆ, ಹುತ್ತ ಒಡೆದಿದ್ದರೆ ಸರ್ಪ ದೋಷ ಪ್ರಾಪ್ತವಾಗುತ್ತದೆ. ಜಾತಕದಲ್ಲಿ ಕಾಲ ಸರ್ಪ ದೋಷ, ಕುಜ/ಮಂಗಳ ದೋಷ, ಸಂತಾನ ದೋಷ ಅಥವಾ ಇತರೆ ದೋಷಗಳಿರುವವರು ಈ ಪೂಜೆ ಮಾಡಿಸುವುದು ವಾಡಿಕೆ.

​ಈ ಪೂಜೆಯಲ್ಲಿ ಅರ್ಚಕರು ಪ್ರತ್ಯೇಕ ನಾಗಗಳ ಹೆಸರನ್ನು ಉಲ್ಲೇಖಿಸಿ ಬಲಿ ನೀಡಿ ಸಂತೃಪ್ತಿಪಡಿಸುತ್ತಾರೆ. ಪ್ರತಿಯೊಬ್ಬ ಭಕ್ತನ ಸಮಸ್ಯೆಗಳು ಮತ್ತು ಕಾರಣಗಳು ಭಿನ್ನವಾಗಿರುವುದರಿಂದ, ಪೂಜೆಯು ವೈಯಕ್ತಿಕ ಸಂಕಲ್ಪದೊಂದಿಗೆ ನಡೆಯುವುದು ಅತ್ಯಗತ್ಯ ಎಂಬುದು ಧಾರ್ಮಿಕ ನಿಷ್ಠರ ಅಂಬೋಣ.

​ಬದಲಾವಣೆ ವಿರುದ್ಧ ಮುಗಿಬಿದ್ದ ಭಕ್ತರು

​ಆದರೆ ಇತ್ತೀಚಿನ ದಿನಗಳಲ್ಲಿ ಕುಕ್ಕೆ ಕ್ಷೇತ್ರದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ ಎಂಬ ಕಾರಣ ನೀಡಿ, ಆಡಳಿತ ಮಂಡಳಿಯು ಪ್ರತ್ಯೇಕ ಸಂಕಲ್ಪದ ಬದಲು 'ಸಾಮೂಹಿಕ ಸಂಕಲ್ಪ' ಪದ್ಧತಿಗೆ ಮುನ್ನುಡಿ ಬರೆದಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಪ್ರಸನ್ನ ದರ್ಬೆ, "ದೇವಾಲಯದ ವ್ಯವಸ್ಥೆಯನ್ನು ಸರಳೀಕರಿಸುವ ನೆಪದಲ್ಲಿ ಅನಾದಿ ಕಾಲದಿಂದ ಬಂದ ಪದ್ಧತಿಯನ್ನು ಬದಲಾಯಿಸಲು ಯಾರೊಗೂ ಅಧಿಕಾರವಿಲ್ಲ" ಎಂದು ಕಿಡಿಕಾರಿದ್ದಾರೆ.

​"ದೇವಾಲಯಕ್ಕೆ ತನ್ನದೇ ಆದ 'ದಿಟ್ಟಂ' (ಬರೆದಿಟ್ಟಿರುವ ಪೂಜಾ ಪದ್ಧತಿಯ ನಿಯಮಾವಳಿ) ಇದೆ. ಭಕ್ತರ ದಟ್ಟಣೆ ಹೆಚ್ಚಾಗಿದೆ ಎಂಬ ಕಾರಣಕ್ಕೆ ಶತಮಾನಗಳ ಸಂಪ್ರದಾಯವನ್ನು ವಿರೂಪಗೊಳಿಸುವುದು ಸರಿಯಲ್ಲ. ಆಡಳಿತ ಮಂಡಳಿಯವರು ದೇವರ ಸೇವಕರು ವಿನಃ ಮಾಲೀಕರಲ್ಲ" ಎಂದು ಅವರು ತೀವ್ರವಾಗಿ ಆಕ್ಷೇಪಿಸಿದ್ದಾರೆ.

​ಪ್ರಸನ್ನ ದರ್ಬೆ ಅವರ ಪ್ರಮುಖ ಆಗ್ರಹಗಳು:

  1. ​ಪ್ರತ್ಯೇಕ ಸಂಕಲ್ಪ ಮರುಜಾರಿ: ಆಶ್ಲೇಷ ಬಲಿ ಪೂಜೆಯಲ್ಲಿ ಹಿಂದಿನಂತೆ ಪ್ರತ್ಯೇಕ ಸಂಕಲ್ಪ ಪದ್ಧತಿಯನ್ನು ತಕ್ಷಣವೇ ಮರು ಜಾರಿಗೊಳಿಸಬೇಕು.
  2. ​ಸಾಮೂಹಿಕ ಸಂಕಲ್ಪ ರದ್ದು: ದೇವಾಲಯದ ದಿಟ್ಟಂಗೆ ವಿರುದ್ಧವಾಗಿ ಜಾರಿಗೆ ತಂದಿರುವ ಸಾಮೂಹಿಕ ಸಂಕಲ್ಪ ಪದ್ಧತಿಯನ್ನು ಕೂಡಲೇ ಕೈಬಿಡಬೇಕು.
  3. ​ವ್ಯವಸ್ಥೆ ಸುಧಾರಿಸಿ, ಪದ್ಧತಿಯನ್ನಲ್ಲ: ಭಕ್ತರ ಸಂಖ್ಯೆ ಹೆಚ್ಚಿದ್ದರೆ ಅದಕ್ಕೆ ತಕ್ಕಂತೆ ಮೂಲಭೂತ ಸೌಕರ್ಯ ಹಾಗೂ ಆಡಳಿತಾತ್ಮಕ ವ್ಯವಸ್ಥೆಯನ್ನು ವಿಸ್ತರಿಸಬೇಕೇ ಹೊರತು, ಧಾರ್ಮಿಕ ಪದ್ಧತಿಯನ್ನೇ ಬದಲಾಯಿಸುವುದು ಖಂಡನೀಯ.
  4. ​ಅಭಿವೃದ್ಧಿಗೆ ಹಣ ಬಳಕೆ: ದೇವಾಲಯದ ಆದಾಯವನ್ನು ಭಕ್ತರ ಸೌಕರ್ಯ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಬಳಸಬೇಕು, ದುಂದುವೆಚ್ಚಕ್ಕಲ್ಲ.

​


ದೇವಾಲಯದ ಪಾವಿತ್ರ್ಯತೆ ಮತ್ತು ಧಾರ್ಮಿಕ ಆಚರಣೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಕೂಡಲೇ ಎಚ್ಚೆತ್ತುಕೊಳ್ಳಬೇಕು. ಒಂದು ವೇಳೆ ಹಳೆಯ ಪದ್ಧತಿಯನ್ನು ಮರುಸ್ಥಾಪಿಸದಿದ್ದರೆ, ಮುಂದಿನ ದಿನಗಳಲ್ಲಿ ಭಕ್ತರನ್ನು ಒಗ್ಗೂಡಿಸಿ ಉಗ್ರ ಸ್ವರೂಪದ ನ್ಯಾಯಯುತ ಹೋರಾಟ ನಡೆಸಲಾಗುವುದು ಎಂದು ಪ್ರಸನ್ನ ದರ್ಬೆ ಹಾಗೂ ಭಕ್ತ ವಲಯ ಎಚ್ಚರಿಕೆ ನೀಡಿದೆ.