ದಕ್ಷಿಣ ಕನ್ನಡ

ಉಜಿರೆ : ಉಜಿರೆ SDM ಕಾಲೇಜಿನಲ್ಲಿ ಸಾಮಾಜಿಕ ಜಾಲತಾಣ ಜಾಗೃತಿ ಉಪನ್ಯಾಸ: ‘ರೈಡಿಂಗ್ ಜೋಡಿ’ ಯಿಂದ ವಿದ್ಯಾರ್ಥಿಗಳೊಂದಿಗೆ ಸಂವಾದ


ಉಜಿರೆ:ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಮಾಧ್ಯಮಗಳನ್ನು ಜವಾಬ್ದಾರಿಯುತವಾಗಿ ಬಳಸುವುದು ಮತ್ತು ಸಮಾಜದ ಮೇಲೆ ಧನಾತ್ಮಕ ಪ್ರಭಾವ ಬೀರುವುದು ಅತ್ಯಗತ್ಯ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (SDM) ಸ್ವಾಯತ್ತ ಕಾಲೇಜಿನ ವ್ಯಾಪಾರ ಆಡಳಿತ ವಿಭಾಗದ (BBA) ವತಿಯಿಂದ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅಭಿಪ್ರಾಯಪಡಲಾಯಿತು.

​ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ‘ಸಾಮಾಜಿಕ ಜಾಲತಾಣಗಳ ಮೂಲಕ ಸಾಮಾಜಿಕ ಜವಾಬ್ದಾರಿ: ಇಂದಿನ ಕಾಲಘಟ್ಟದ ಹೊಸ ಆಯಾಮಗಳು’ ಎಂಬ ವಿಷಯದ ಕುರಿತು ಸಂವಾದಾತ್ಮಕ ಅಧಿವೇಶನ ಮಂಗಳವಾರ ಯಶಸ್ವಿಯಾಗಿ ನಡೆಯಿತು.

​ಈ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಸಿದ್ಧ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ಸ್ ಹಾಗೂ ಸಾಮಾಜಿಕ ಜಾಲತಾಣ ಪ್ರಭಾವಿಗಳಾದ ‘ರೈಡಿಂಗ್ ಜೋಡಿ’ (riding_jodi_) ಖ್ಯಾತಿಯ ಶ್ಯಾಮ್ ಕಾಮತ್ ಮತ್ತು ಶೈನಿ ಕಾಮತ್ ಭಾಗವಹಿಸಿದ್ದರು.

​ಸಂವಾದದಲ್ಲಿ ಮಾತನಾಡಿದ ಸಂಪನ್ಮೂಲ ವ್ಯಕ್ತಿಗಳು, ಸಾಮಾಜಿಕ ಮಾಧ್ಯಮಗಳು ಕೇವಲ ಮನರಂಜನೆಗೆ ಸೀಮಿತವಾಗಿರದೆ, ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಉತ್ತಮ ವೇದಿಕೆಯಾಗಬಲ್ಲವು. ಯುವಜನತೆ ಮತ್ತು ವಿದ್ಯಾರ್ಥಿಗಳು ಇದನ್ನು ಎಚ್ಚರಿಕೆಯಿಂದ ಹಾಗೂ ಜವಾಬ್ದಾರಿಯುತವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು. ವಿದ್ಯಾರ್ಥಿಗಳು ಕೇಳಿದ ಹಲವು ಪ್ರಶ್ನೆಗಳಿಗೆ ಅವರು ಸ್ವಾರಸ್ಯಕರವಾಗಿ ಉತ್ತರಿಸಿ ಮಾರ್ಗದರ್ಶನ ನೀಡಿದರು.

​ಕಾರ್ಯಕ್ರಮದಲ್ಲಿ BBA ವಿಭಾಗದ ಉಪನ್ಯಾಸಕರು, ಸಿಬ್ಬಂದಿ ವರ್ಗ ಹಾಗೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿಭಾಗದ ವತಿಯಿಂದ ಆಗಮಿಸಿದ ಅಥಿತಿಗಳನ್ನು ಹಾಗೂ ಆಸಕ್ತರನ್ನು ಆತ್ಮೀಯವಾಗಿ ಸ್ವಾಗತಿಸಿ ಗೌರವಿಸಲಾಯಿತು.



image