ದಕ್ಷಿಣ ಕನ್ನಡ

ಬೆಳ್ತಂಗಡಿ : ಬದುಕಿನ ಕನಸು ನನಸಾಗಿಸಲು ಪಿಯು ಶಿಕ್ಷಣವೇ ಪ್ರಮುಖ ಘಟ್ಟ: ಕೆ. ಪ್ರತಾಪ್‌ಸಿಂಹ ನಾಯಕ್

 


ಬೆಳ್ತಂಗಡಿ: 'ನಮ್ಮಲ್ಲಿರುವ ಅಗಾಧ ಪ್ರತಿಭೆ ಮತ್ತು ಶಕ್ತಿಯನ್ನು ಜಗತ್ತಿಗೆ ತೋರ್ಪಡಿಸುವುದೇ ನಿಜವಾದ ಶಿಕ್ಷಣದ ಮುಖ್ಯ ಉದ್ದೇಶ. ಅದರಲ್ಲೂ ವಿಶೇಷವಾಗಿ ಪಿಯುಸಿ ಶಿಕ್ಷಣದ ಹಂತವು ವಿದ್ಯಾರ್ಥಿಗಳ ಭವಿಷ್ಯದ ಕನಸುಗಳಿಗೆ ಭದ್ರ ಬುನಾದಿ ಒದಗಿಸುವ ಅತ್ಯಂತ ಮೌಲ್ಯಯುತ ಸಮಯ. ಈ ಅವಧಿಯಲ್ಲಿ ವಿದ್ಯಾರ್ಥಿಗಳು ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು, ಭಾವನೆಗಳಿಗಿಂತ ಶಿಸ್ತಿಗೆ ಹೆಚ್ಚಿನ ಆದ್ಯತೆ ನೀಡಬೇಕು' ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಹಾಗೂ ಹಿರಿಯ ವಕೀಲ ಕೆ. ಪ್ರತಾಪ್‌ಸಿಂಹ ನಾಯಕ್ ಕರೆ ನೀಡಿದರು.

​ಸ್ಥಳೀಯ ಗುರುವಾಯನಕೆರೆಯ ಬಂಟರ ಭವನದಲ್ಲಿ ವಿದ್ವತ್ ಪಿಯು ಕಾಲೇಜು ಆಯೋಜಿಸಿದ್ದ 'ಸಾಧಕರೊಂದಿಗೆ ಸಂವಾದ ಮತ್ತು ಸನ್ಮಾನ ಸಮಾರಂಭ'ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಶಿಕ್ಷಣ ಸಂಸ್ಥೆಗಳು ವ್ಯಾಪಾರಿ ಕೇಂದ್ರಗಳಾಗಬಾರದು: ಸುಭಾಶ್ಚಂದ್ರ ಶೆಟ್ಟಿ

​ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿದ್ವತ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, "ಶಿಕ್ಷಣ ಸಂಸ್ಥೆಗಳು ಬೇವರಿ ಇಲ್ಲದೆ ಕೇವಲ ವ್ಯವಹಾರದ ಕೇಂದ್ರಗಳಾಗಬಾರದು, ಬದಲಿಗೆ ಮೌಲ್ಯಯುತ ಶಿಕ್ಷಣ ನೀಡುವ ತಾಣಗಳಾಗಬೇಕು. ವಿದ್ಯಾರ್ಥಿಗಳು ತಮ್ಮ ಬದುಕಿನ ಅತಿ ಮುಖ್ಯವಾದ ಈ ಎರಡು ವರ್ಷಗಳನ್ನು ವ್ಯರ್ಥ ಮಾಡಿಕೊಳ್ಳದೆ, ಮಾರ್ಗದರ್ಶಕರು ಹಾಗೂ ಕೌನ್ಸಿಲರ್‌ಗಳು ನೀಡುವ ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಯಶಸ್ಸು ಗಳಿಸಬೇಕು" ಎಂದರು.

ಸಾಧಕ ವಿದ್ಯಾರ್ಥಿಗಳಿಗೆ ಅದ್ಧೂರಿ ಸನ್ಮಾನ

​ಇದೇ ವೇಳೆ ರಾಜ್ಯಮಟ್ಟದಲ್ಲಿ ಗಮನಾರ್ಹ ಸಾಧನೆಗೈದ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಾದ ಚಿನ್ಮಯ್ ಜಿಕೆ, ಸಂಪತ್ ಕುಮಾರ್, ತನುಶ್ರೀ, ಪ್ರತೀಕ್ ವಿಎಸ್, ಅಜಿತ್ ಎಚ್.ಸಿ, ಮನೀಶ್ ಡಿ, ರಾಹುಲ್ ಸ್ವಾಮಿ, ರಿತೇಶ್‌, ಪ್ರಥಮ್ ಆ‌ರ್., ರಾಹುಲ್ ಜಿಎಸ್, ರಿಶಾಂತ್ ವೈಪಿ, ಸೃಷ್ಟಿ ಎಸ್, ನೇಹಾ ಭಟ್ ಮತ್ತು ಧ್ಯಾನ್‌ ಎಸ್‌. ಹಾಗೂ ಅವರ ಪೋಷಕರನ್ನು ವೇದಿಕೆಯಲ್ಲಿದ್ದ ಗಣ್ಯರು ಗೌರವಿಸಿ, ಸನ್ಮಾನಿಸಿದರು.

​ಈ ಸಮಾರಂಭದಲ್ಲಿ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಗಂಗಾಧ‌ರ್ ಇ. ಮಂಡಗಳಲೆ, ಕಾರ್ಯದರ್ಶಿ ಪ್ರಜ್ವಲ್ ರೈ, ಖಜಾಂಚಿ ಕಾಶಿನಾಥ ಎಂ.ಕೆ., ಪ್ರಾಂಶುಪಾಲ ಬಾಲಕೃಷ್ಣ ನಾಯಕ್‌ ಹಾಗೂ ಆಡಳಿತಾಧಿಕಾರಿ ಅಶೋಕ ಕುಮಾ‌ರ್ ಶೆಟ್ಟಿ ಉಪಸ್ಥಿತರಿದ್ದರು.

​ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿ ಸನ್ನಿಧಿ ಎ.ಎಚ್. ಸ್ವಾಗತಿಸಿದರೆ, ಕೊನೆಯಲ್ಲಿ ಕಾಶ್ವಿ ದಿನೇಶ್ ವಂದನಾರ್ಪಣೆ ಮಾಡಿದರು.



image