ದಕ್ಷಿಣ ಕನ್ನಡ

Bantwal :ಧರ್ಮಸ್ಥಳ ಭಜನೋತ್ಸವ: ಬಂಟ್ವಾಳ ತಾಲೂಕು ಭಜನಾ ಪರಿಷತ್ ಪೂರ್ವಭಾವಿ ಸಭೆ ಸಂಪನ್ನ

ಬಂಟ್ವಾಳ: ಇಲ್ಲಿನ ಉನ್ನತಿ ಸೌಧದ ಸಭಾಂಗಣದಲ್ಲಿ ಬಂಟ್ವಾಳ ತಾಲೂಕು ಭಜನಾ ಪರಿಷತ್‌ನ ಮಹತ್ವದ ಸಭೆಯು ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಮುರಳೀಧರ ಪೊಳಲಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

​ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್ ಡಿ., "ಹಿಂದೂ ಧರ್ಮದ ಸನಾತನ ಸಂಸ್ಕೃತಿಯನ್ನು ಉಳಿಸಿ, ಮುಂದಿನ ಪೀಳಿಗೆಗೆ ಬೆಳೆಸುವಲ್ಲಿ ಭಜನೆಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ನಿರಂತರ ಭಜನೆಯಿಂದ ಯುವಜನತೆ ಹಾಗೂ ಮಕ್ಕಳಲ್ಲಿ ಧಾರ್ಮಿಕ ಸಂಸ್ಕಾರ ಮೂಡಲು ಸಾಧ್ಯ. ಪೂಜ್ಯ ಖಾವಂದರ ಸಮಾಜಮುಖಿ ಚಿಂತನೆಯ ಭಾಗವಾಗಿ ಕಳೆದ ೨೮ ವರ್ಷಗಳಿಂದ ಭಜನಾ ಕಮ್ಮಟ ನಿರಂತರವಾಗಿ ನಡೆದುಕೊಂಡು ಬರುತ್ತಿದ್ದು, ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು" ಎಂದು ಕರೆ ನೀಡಿದರು.

​ಇದೇ ವೇಳೆ ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ. ಅಳಿಯೂರು ಮಾತನಾಡಿ, "ಧರ್ಮಸ್ಥಳದಲ್ಲಿ ಸೆಪ್ಟೆಂಬರ್ ೨೮ ರಿಂದ ಅಕ್ಟೋಬರ್ ೪ ರವರೆಗೆ ೨೮ನೇ ವರ್ಷದ ರಾಜ್ಯಮಟ್ಟದ ಭಜನಾ ಕಮ್ಮಟ ಹಾಗೂ ಭಜನೋತ್ಸವ ಕಾರ್ಯಕ್ರಮ ಆಯೋಜನೆಯಾಗಿದೆ" ಎಂದು ಮಾಹಿತಿ ನೀಡಿದರು.

​ಕಮ್ಮಟದ ಕುಣಿತ ಭಜನೆ ತರಬೇತುದಾರ ಸಂದೇಶ್ ಮದ್ದಡ್ಕ ಮಾತನಾಡಿ, ಬಂಟ್ವಾಳ ತಾಲೂಕಿನ ಭಜನಾ ಮಂಡಳಿಗಳ ಸಕ್ರಿಯ ಕಾರ್ಯವೈಖರಿ ಮತ್ತು ಬದ್ಧತೆಯನ್ನು ಶ್ಲಾಘಿಸಿದರು.

​ಕಾರ್ಯಕ್ರಮದ ಆರಂಭದಲ್ಲಿ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ. ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ತಾಲೂಕು ವಿಚಕ್ಷಣಾಧಿಕಾರಿ ಸುಬ್ರಾಯ ನಾಯ್ಕ ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು. ಈ ಪೂರ್ವಭಾವಿ ಸಭೆಯಲ್ಲಿ ತಾಲೂಕಿನ ವಿವಿಧ ಭಜನಾ ಮಂಡಳಿಗಳ ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.



image