ಕ್ರೈಂ

Bantwal: ಲಾವಣ್ಯ ಹತ್ಯೆ ಪ್ರಕರಣ: ಸಾರ್ವಜನಿಕರ ಮುಂದೆಯೇ ಯುವತಿಯನ್ನು ಬಲಿಪಡೆದ ಸೈಕೋ ಪ್ರೇಮಿ ಚೇತನ್ ಕೊನೆಗೂ ಪೊಲೀಸ್ ಬಲೆಗೆ!

 

ಬಂಟ್ವಾಳ: ಪ್ರೀತಿಯನ್ನು ನಿರಾಕರಿಸಿದಳು ಎಂಬ ಒಂದೇ ಒಂದು ಕಾರಣಕ್ಕಾಗಿ, ನಡುರಸ್ತೆಯಲ್ಲೇ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಪಾಪಿ ಚೇತನ್‌ನನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಸಿ ರೋಡ್‌ನಲ್ಲಿ ನಡೆದಿದ್ದ ಲಾವಣ್ಯ ಗೌಡ ಭೀಕರ ಹತ್ಯೆ ಪ್ರಕರಣದ ಆರೋಪಿ ಈಗ ಕಂಬಿ ಎಣಿಸುವಂತಾಗಿದೆ.

ನಡೆದಿದ್ದೇನು?

ಕಕ್ಕೆಪದವು ನಿವಾಸಿಯಾದ 21 ವರ್ಷದ ಯುವತಿ ಲಾವಣ್ಯ ಗೌಡ, ಗುರುವಾರ ಸಂಜೆ ಸುಮಾರು 6 ಗಂಟೆಯ ವೇಳೆಗೆ ಬಿಸಿ ರೋಡ್‌ನ ನೂತನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಊರಿಗೆ ತೆರಳಲು ಬಸ್‌ಗಾಗಿ ಕಾಯುತ್ತಿದ್ದರು. ಸಂಜೆಯ ಸಮಯವಾದ್ದರಿಂದ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿತ್ತು. ಇದೇ ವೇಳೆ ಅಲ್ಲಿಗೆ ಬಂದ ಚೇತನ್, ಯುವತಿಯೊಂದಿಗೆ ಜಗಳ ತೆಗೆದು, ತಾನು ತಂದಿದ್ದ ಹರಿತವಾದ ಆಯುಧದಿಂದ ಏಕಾಏಕಿ ಭೀಕರವಾಗಿ ದಾಳಿ ನಡೆಸಿದ್ದ. ಸಾರ್ವಜನಿಕರು ನೋಡನೋಡುತ್ತಿದ್ದಂತೆಯೇ ಲಾವಣ್ಯಳನ್ನು ರಕ್ತದ ಮಡುವಿನಲ್ಲಿ ತಳ್ಳಿ ಸ್ಥಳದಿಂದ ಪರಾರಿಯಾಗಿದ್ದ.

ಚಿಕಿತ್ಸೆ ಫಲಿಸದೆ ಯುವತಿ ಸಾವು:

ಘಟನೆ ನಡೆದ ತಕ್ಷಣ ಸ್ಥಳೀಯರು ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಲಾವಣ್ಯಳನ್ನು, ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಳವಾದ ಗಾಯಗಳಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. 21 ವರ್ಷದ ಯುವತಿಯ ಅಕಾಲಿಕ ಮರಣ ಇಡೀ ಭಾಗವನ್ನು ಕಣ್ಣೀರಲ್ಲಿ ಮುಳುಗಿಸಿದೆ.

ಏಕಪಕ್ಷೀಯ ಪ್ರೀತಿಯ ಉನ್ಮಾದ:

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಹಂತಕ ಚೇತನ್ ಮೃತ ಲಾವಣ್ಯಳ ದೂರದ ಸಂಬಂಧಿಯಾಗಿದ್ದ ಎಂದು ತಿಳಿದುಬಂದಿದೆ. ಚೇತನ್ ಆಕೆಯನ್ನು ಏಕಪಕ್ಷೀಯವಾಗಿ ಪ್ರೀತಿಸುತ್ತಿದ್ದು, ಮದುವೆಯಾಗುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಆದರೆ ಲಾವಣ್ಯ ಆತನ ಪ್ರಸ್ತಾಪವನ್ನು ಸ್ಪಷ್ಟವಾಗಿ ನಿರಾಕರಿಸಿದ್ದರು. ಇದೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಈ ಸೈಕೋ ಪ್ರೇಮಿ, ಆಕೆಯನ್ನು ಮುಗಿಸಲು ಸ್ಕೆಚ್ ಹಾಕಿ ಸಾರ್ವಜನಿಕ ಸ್ಥಳದಲ್ಲೇ ಈ ಕೃತ್ಯ ಎಸಗಿದ್ದಾನೆ.

ಆರೋಪಿ ಅರೆಸ್ಟ್:

ಘಟನೆ ತಿಳಿಯುತ್ತಿದ್ದಂತೆಯೇ ತಕ್ಷಣ ಕಾರ್ಯಪ್ರವೃತ್ತರಾದ ಬಂಟ್ವಾಳ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆರೋಪಿಯ ಪತ್ತೆಗಾಗಿ ಜಾಲ ಬೀಸಿದ್ದ ಪೊಲೀಸರು, ತೀವ್ರ ಹುಡುಕಾಟದ ನಂತರ ಹಂತಕ ಚೇತನ್‌ನನ್ನು ಬಂಧಿಸಿದ್ದಾರೆ. ಪ್ರೀತಿ ನಿರಾಕರಿಸಿದ ಕಾರಣಕ್ಕೆ ಚಿಗುರು ಪ್ರಾಯದ ಯುವತಿಯನ್ನು ಬಲಿಪಡೆದ ಈ ನರಾಧಮನಿಗೆ ಕಠಿಣಾತಿ ಕಠಿಣ ಶಿಕ್ಷೆಯಾಗಬೇಕು ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.



image