ದಕ್ಷಿಣ ಕನ್ನಡ

ಕಲ್ಲಮುಂಡ್ಕೂರು : ಚಿಕ್ಕ ವಯಸ್ಸಿನಲ್ಲೇ ಸಾಧನೆಯ ಹಾದಿ: ಭಜನೆ, ಸಾಂಸ್ಕೃತಿಕ ಬರಹದ ಮೂಲಕ ಕಲ್ಲಮುಂಡ್ಕೂರು ರಿತಿಕಾ ಹೊಸ ಮಾದರಿ



ಕಲ್ಲಮುಂಡ್ಕೂರು (ದಕ್ಷಿಣ ಕನ್ನಡ): ಇಂದಿನ ಡಿಜಿಟಲ್ ಯುಗದಲ್ಲಿ ಬಹುತೇಕ ಮಕ್ಕಳು ಮೊಬೈಲ್ ಗೇಮ್ಸ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಮಯ ವ್ಯರ್ಥ ಮಾಡುತ್ತಿದ್ದರೆ, ಇಲ್ಲೊಬ್ಬರು ಬಾಲಕಿ ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಂಡು ನಾಡಿನ ಸಂಸ್ಕೃತಿ ಮತ್ತು ಕಲೆಯನ್ನು ಪೋಷಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಐದನೇ ತರಗತಿಯಲ್ಲೇ ಭಜನಾ ರಂಗಕ್ಕೆ ಕಾಲಿಟ್ಟು, ಇಂದು ಸಾಂಸ್ಕೃತಿಕ ಬರಹಗಾರ್ತಿಯಾಗಿ ಹೊರಹೊಮ್ಮಿರುವ ಕಲ್ಲಮುಂಡ್ಕೂರು ಮೂಲದ ಯುವ ಪ್ರತಿಭೆ ರಿತಿಕಾ ಅವರ ಸಾಧನೆ ಎಲ್ಲರ ಗಮನ ಸೆಳೆಯುತ್ತಿದೆ.

​೪ ವರ್ಷಗಳಲ್ಲಿ ೨೩೦ಕ್ಕೂ ಹೆಚ್ಚು ಪ್ರದರ್ಶನ!

​೨೦೨೨ರ ನವೆಂಬರ್ ೧೪ರಂದು (೫ನೇ ತರಗತಿಯಲ್ಲಿದ್ದಾಗ) ಭಜನಾ ಪಯಣ ಆರಂಭಿಸಿದ ರಿತಿಕಾ, ಪ್ರಸ್ತುತ ೯ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳ ಅಲ್ಪಾವಧಿಯಲ್ಲೇ ಸುಮಾರು ೨೩೦ಕ್ಕೂ ಹೆಚ್ಚು ಭಜನಾ ಸಂಧ್ಯಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಅಷ್ಟೇ ಅಲ್ಲದೆ, ಸುಮಾರು ೧೬ ಭಜನಾ ತಂಡಗಳಿಗೆ ತರಬೇತಿ ನೀಡುವ ಹಂತದಲ್ಲೂ ಭಾಗಿಯಾಗಿ, ಇತರ ಮಕ್ಕಳಿಗೆ ಭಜನೆ, ಕುಣಿತ ಭಜನೆ ಮತ್ತು ವೇದಿಕೆ ಪ್ರದರ್ಶನದ ತರಬೇತಿ ನೀಡಲು ನೆರವಾಗಿದ್ದಾರೆ.

​ಭಜನೆ ಜೊತೆಗೆ ಬರವಣಿಗೆಯ ಹವ್ಯಾಸ

​ರಿತಿಕಾ ಅವರ ವಿಶೇಷತೆ ಎಂದರೆ ಕೇವಲ ಭಜನೆಗೆ ಸೀಮಿತವಾಗದೆ, ಭಜಕರ ಸಾಧನೆ, ಮಕ್ಕಳಲ್ಲಿರುವ ಸುಪ್ತ ಪ್ರತಿಭೆ, ಭಜನಾ ತಂಡಗಳ ಪುರಸ್ಕಾರಗಳು ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತು ಲೇಖನಗಳನ್ನು ಬರೆಯುವ ಮೂಲಕ ಸಮಾಜಕ್ಕೆ ಪರಿಚಯಿಸುತ್ತಿದ್ದಾರೆ. ಮೊಬೈಲ್ ತಂತ್ರಜ್ಞಾನವನ್ನು ಜ್ಞಾನ ಮತ್ತು ಕಲೆಯ ಪ್ರಚಾರಕ್ಕಾಗಿ ಹೇಗೆ ಬಳಸಿ​ಕೊಳ್ಳಬಹುದು ಎಂಬುದಕ್ಕೆ ಇವರ ಕಾರ್ಯವೇ ಸಾಕ್ಷಿ.

​"ಮೊಬೈಲ್ ಸಾಧನಕ್ಕೆ ಮಕ್ಕಳು ದಾಸರಾಗಬಾರದು. ಬದಲಿಗೆ ನಮ್ಮಲ್ಲಿರುವ ಕಲೆ, ಪ್ರತಿಭೆ ಹಾಗೂ ಜ್ಞಾನವರ್ಧನೆಗೆ ತಂತ್ರಜ್ಞಾನವನ್ನು ಧನಾತ್ಮಕವಾಗಿ ಬಳಸಿಕೊಳ್ಳಬೇಕು" ಎನ್ನುವುದು ರಿತಿಕಾ ಅವರ ಸಂದೇಶ.


​ಕಠಿಣ ಪರಿಶ್ರಮ ಮತ್ತು ಮಾರ್ಗದರ್ಶನ

​ಆರಂಭದಲ್ಲಿ ವೇದಿಕೆ ಹತ್ತಲು ಹಿಂಜರಿಯುತ್ತಿದ್ದ ರಿತಿಕಾ, ಕಲ್ಲಮುಂಡ್ಕೂರು ಭಜನಾ ತಂಡವನ್ನು ಸೇರಿದ ನಂತರ ಅಪಾರ ಆತ್ಮವಿಶ್ವಾಸ ಬೆಳೆಸಿಕೊಂಡಿದ್ದಾರೆ. ಭಜನೆಯ ಮೇಲಿನ ತೀವ್ರ ಆಸಕ್ತಿಯಿಂದಾಗಿ ದೂರದ ಊರಿನಿಂದ ಕಾಡು-ಗುಡ್ಡಗಳ ಹಾದಿ ದಾಟಿ ಬಂದು, ಗುರುಗಳಾದ ಅಶೋಕ್ ನಾಯ್ಕ್ ಕಳಸಬೈಲು ಅವರಿಂದ ಭಜನೆ ಹಾಗೂ ಕುಣಿತ ಭಜನೆಯ ಶಿಕ್ಷಣ ಪಡೆಯುತ್ತಿದ್ದಾರೆ. ಜೊತೆಗೆ ಸಂಗೀತ ಆಸಕ್ತಿಯಿಂದಾಗಿ ಸುದೇಶ್ ಹೊಸಬೆಟ್ಟು ಹಾಗೂ ದುರ್ಗೇಶ್ ನಿಲುಗಲ್ ಅವರಿಂದ ಹಾರ್ಮೋನಿಯಂ ವಾದನ ಕಲಿಯುತ್ತಿದ್ದಾರೆ.

​

ಹಿರಿಯರ ಪ್ರೋತ್ಸಾಹ - ಗೌರವ

​ರಿತಿಕಾ ಅವರ ಈ ಸಂಸ್ಕೃತಿ ಸೇವೆಯನ್ನು ಗುರುತಿಸಿ ಧರ್ಮಸ್ಥಳ ಭಜನಾ ಪರಿಷತ್ ರಾಜ್ಯಾಧ್ಯಕ್ಷ ಚಂದ್ರಶೇಖರ್ ಸಾಲ್ಯಾನ್, ಸಂತೋಷ್ ಪಿ. ಅಳಿಯೂರು, ಮಹಾಲಿಂಗೇಶ್ವರ ಭಜನಾ ತಂಡದ ಅಧ್ಯಕ್ಷ ಕೃಷ್ಣ ಕುಲಾಲ್, ಕಾರ್ಯದರ್ಶಿ ವಾಸು ನಾಯ್ಕ್ ಹಾಗೂ ಆಳ್ವಾಸ್ ಸಂಸ್ಥೆಯ ವಿವೇಕ್ ಆಳ್ವ ಅವರು ಪ್ರೋತ್ಸಾಹ ನೀಡಿದ್ದಾರೆ. ಹೆತ್ತವರಾದ ಗಣೇಶ್ ಮತ್ತು ಸುರೇಖಾ ಅವರ ಸಂಪೂರ್ಣ ಬೆಂಬಲ ಇವರ ಬೆಳವಣಿಗೆಗೆ ಶಕ್ತಿಯಾಗಿದೆ. ಗೋಪಾಲಕೃಷ್ಣ ದೇವಸ್ಥಾನದಲ್ಲಿ ಇವರ ಪ್ರಚಾರ ಸೇವೆಯನ್ನು ಗೌರವಿಸಿ ಶ್ರೀಕೃಷ್ಣನ ಮೂರ್ತಿಯ ಸ್ಮರಣಿಕೆ ನೀಡಿ ಪುರಸ್ಕರಿಸಿರುವುದು ಇವರ ಪಯಣದ ಪ್ರಮುಖ ಮೈಲಿಗಲ್ಲು.

​ಸಂಸ್ಕೃತಿ, ಕಲೆ ಹಾಗೂ ತಂತ್ರಜ್ಞಾನದ ಸದುಪಯೋಗವನ್ನು ಒಟ್ಟಿಗೆ ಸಾಗಿಸುತ್ತಿರುವ ರಿತಿಕಾ ಅವರ ಈ ಸಾಧನೆ ಇಂದಿನ ಪೀಳಿಗೆಯ ಮಕ್ಕಳಿಗೆ ನಿಜಕ್ಕೂ ಸ್ಪೂರ್ತಿದಾಯಕ.



image