ದಕ್ಷಿಣ ಕನ್ನಡ

ಬೆಳ್ತಂಗಡಿ : ಧರ್ಮಸ್ಥಳದ ವಿರುದ್ಧದ 1,510 ಅಸಹಜ ಸಾವುಗಳ ಆರೋಪ: ವರದಿ ಸಂಪೂರ್ಣ ಸುಳ್ಳು ಎಂದ ಗ್ರಾಮಸ್ಥರು!



ಬೆಳ್ತಂಗಡಿ: ಧರ್ಮಸ್ಥಳದಲ್ಲಿ 2000ರಿಂದ 2014ರವರೆಗೆ 1,510 ಅಸಹಜ ಸಾವುಗಳು ಸಂಭವಿಸಿವೆ ಎಂಬ ವರದಿಗಳ ವಿರುದ್ಧ ಸ್ಥಳೀಯ ಗ್ರಾಮಸ್ಥರು ಧ್ವನಿ ಎತ್ತಿದ್ದಾರೆ. ಈ ಅಂಕಿಅಂಶಗಳು ಸತ್ಯಕ್ಕೆ ದೂರವಾಗಿದ್ದು, ಕೇವಲ ಊಹಾಪೋಹದಿಂದ ಸೃಷ್ಟಿಸಲಾಗಿದೆ ಎಂದು ಧರ್ಮಸ್ಥಳದ ನಿವಾಸಿ ಶ್ರೀನಿವಾಸ್ ರಾವ್ ಸ್ಪಷ್ಟಪಡಿಸಿದ್ದಾರೆ.

​ಸ್ಥಳೀಯ ಗ್ರಾಮಸ್ಥರ ವತಿಯಿಂದ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಾ, ಸೌಜನ್ಯ ಪ್ರಕರಣದ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟವನ್ನು ಕೆಲ ವ್ಯಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.

​ನ್ಯಾಯದ ಹೋರಾಟದ ದಿಕ್ಕು ತಪ್ಪಿಸುವ ಯತ್ನ

​ಸೌಜನ್ಯ ಪ್ರಕರಣದ ತನಿಖೆ ಹಾಗೂ ನ್ಯಾಯದ ಪರವಾದ ಹೋರಾಟವನ್ನು ಬೇರೆ ಬೇರೆ ಆಯಾಮಗಳಿಗೆ ತಿರುಗಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಶ್ರೀನಿವಾಸ್ ರಾವ್ ಆರೋಪಿಸಿದರು. ಇದೇ ವೇಳೆ, "ಸೌಜನ್ಯಳ ಕೊಲೆಗೆ ನ್ಯಾಯ ಸಿಗಬೇಕು, ತಪ್ಪಿತಸ್ಥರು ಯಾರೇ ಆಗಲಿ ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂಬುದು ನಮ್ಮ ಮೊದಲ ಹಾಗೂ ಸ್ಪಷ್ಟ ನಿಲುವು. ನಮಗೂ ಆ ಹೆಣ್ಣಿಗೆ ನ್ಯಾಯ ಸಿಗುವ ಬಗ್ಗೆ ಸಂಪೂರ್ಣ ವಿಶ್ವಾಸವಿದೆ" ಎಂದು ಅವರು ಸ್ಪಷ್ಟಪಡಿಸಿದರು.

​ಯುಡಿಆರ್ (UDR) ಪ್ರಕರಣಗಳ ಬಗ್ಗೆ ಸ್ಪಷ್ಟನೆ

​ಧರ್ಮಸ್ಥಳದಲ್ಲಿ 2000ದಿಂದ 2014ರ ಅವಧಿಯಲ್ಲಿ 1,510 ಯುಡಿಆರ್ (ಅಸಹಜ ಸಾವು) ಪ್ರಕರಣಗಳು ದಾಖಲಾಗಿವೆ ಎಂದು ಬಿಂಬಿಸುತ್ತಿರುವುದನ್ನು ಅವರು ತಳ್ಳಿಹಾಕಿದರು. ಇಲಾಖೆಯಿಂದ ಪಡೆದ ಅಧಿಕೃತ ಮಾಹಿತಿಯ ಪ್ರಕಾರ, ಧರ್ಮಸ್ಥಳ ಗ್ರಾಮದ ವ್ಯಾಪ್ತಿಯಲ್ಲಿ ನಡೆದಿರುವುದು ಕೇವಲ 374 ಪ್ರಕರಣಗಳು ಮಾತ್ರ. ಇದಕ್ಕೆ ಬೇಕಾದ ದಾಖಲೆಗಳು ತಮ್ಮ ಬಳಿ ಲಭ್ಯವಿವೆ ಎಂದರು.

​ಮುಂದುವರಿದು, 1,510 ಎಂಬ ಸಂಖ್ಯೆಯನ್ನು ಸಂಪೂರ್ಣವಾಗಿ ಊಹಾಪೋಹದಿಂದ ಸೃಷ್ಟಿಸಲಾಗಿದೆ ಎಂದು ತಿಳಿಸಿದ ಅವರು, ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಸರ್ಕಾರಕ್ಕೆ ತಪ್ಪು ಮಾಹಿತಿ ಒದಗಿಸುತ್ತಿದ್ದಾರೆ ಎಂದು ಆರೋಪಿಸಿದರು. ಈ ಕುರಿತು ಸರ್ಕಾರ ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಹೊರಹಾಕಬೇಕು ಎಂದು ಆಗ್ರಹಿಸಿದರು.

​ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

​ಆಧಾರರಹಿತ ಮತ್ತು ಸುಳ್ಳು ಸುದ್ದಿಗಳಿಂದಾಗಿ ಧರ್ಮಸ್ಥಳ ಕ್ಷೇತ್ರದ ಕೀರ್ತಿಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮಸಿ ಬಳಿಯುವ ಯತ್ನ ನಡೆಯುತ್ತಿದೆ. ಸತ್ಯಕ್ಕೆ ದೂರವಾದ ಮಾಹಿತಿ ಹರಡುತ್ತಿರುವವರ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

​ಇದೇ ಸಂದರ್ಭದಲ್ಲಿ ಗಿರೀಶ್ ಮಟ್ಟಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಜಯಂತ್ ಟಿ. ಅವರ ವಿರುದ್ಧವೂ ಗಂಭೀರ ಆರೋಪಗಳನ್ನು ಮಾಡಿದ ಅವರು, ಧರ್ಮಸ್ಥಳ ಕ್ಷೇತ್ರದ ವಿರುದ್ಧ ನಡೆಯುತ್ತಿರುವ ಈ ಬೆಳವಣಿಗೆಗಳ ಹಿಂದೆ ದೊಡ್ಡ ಮಟ್ಟದ ಷಡ್ಯಂತ್ರ ಅಡಗಿದೆ ಎಂದರು.

​ಸೌಜನ್ಯ ಪ್ರಕರಣದಲ್ಲಿ ನೈಜ ಅಪರಾಧಿಗಳಿಗೆ ಕಾನೂನು ಪ್ರಕಾರ ಶಿಕ್ಷೆಯಾಗಲಿ. ಆದರೆ, ನ್ಯಾಯದ ಹೋರಾಟದ ಬ್ಯಾನರ್ ಅಡಿಯಲ್ಲಿ ಧರ್ಮಸ್ಥಳ ಕ್ಷೇತ್ರ ಹಾಗೂ ಇಲ್ಲಿನ ಗ್ರಾಮಸ್ಥರ ಗೌರವಕ್ಕೆ ಧಕ್ಕೆ ತರುವ ಕುತಂತ್ರಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಶ್ರೀನಿವಾಸ್ ರಾವ್ ಎಚ್ಚರಿಸಿದ್ದಾರೆ.