ದಕ್ಷಿಣ ಕನ್ನಡ

ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಗೋಶಾಲೆಯಲ್ಲಿ ವಿಜೃಂಭಣೆಯ ಗೋಪೂಜೆ; 500 ದೇಸೀ ಹಸುಗಳ ಆಶ್ರಯಕ್ಕೆ ಹೊಸ ಯೋಜನೆ!



ಕಟೀಲು: ಪ್ರಸಿದ್ಧ ಶ್ರೀ ಕ್ಷೇತ್ರ ಕಟೀಲಿನ ಮಾಂಜದ ಗೋಶಾಲೆಯಲ್ಲಿ ಕಿನ್ನಿಗೋಳಿ ಸಜ್ಜನಬಂಧುಗಳ ಸಹಕಾರದೊಂದಿಗೆ ಇಂದು (ನ.11) ಸಂಜೆ ಸಂಭ್ರಮದ ಗೋಪೂಜೆ ಅತ್ಯಂತ ಭಕ್ತಿ-ಶ್ರದ್ಧೆಯಿಂದ ನೆರವೇರಿತು.

​ಕಾರ್ಯಕ್ರಮದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಕಟೀಲು ಕ್ಷೇತ್ರದ ಅರ್ಚಕರಾದ ಆಸ್ರಣ್ಣ ಬಂಧುಗಳು, ಆಡಳಿತ ಸಮಿತಿ ಮುಖಂಡರು, ಕಿನ್ನಿಗೋಳಿ ಪಟ್ಟಣ ಪಂಚಾಯತ್‌ನ ಗಣ್ಯರು ಹಾಗೂ ಸ್ಥಳೀಯ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗೋಮಾತೆಯ ಕೃಪೆಗೆ ಪಾತ್ರರಾದರು.

​


ಈ ಸಂದರ್ಭದಲ್ಲಿ ಮಾತನಾಡಿದ ಕ್ಷೇತ್ರದ ಪ್ರಮುಖರಾದ ಶ್ರೀಹರಿನಾರಾಯಣದಾಸ ಆಸ್ರಣ್ಣರು, "ನಮ್ಮ ಈ ಗೋಶಾಲೆಯಲ್ಲಿ ಪ್ರಸ್ತುತ 11 ವಿಭಿನ್ನ ತಳಿಗಳ 190 ದೇಸೀ ಹಸುಗಳನ್ನು ಆರೈಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಒಟ್ಟು 500 ದೇಸೀ ಹಸುಗಳಿಗೆ ಆಶ್ರಯ ಕಲ್ಪಿಸುವ ನಿಟ್ಟಿನಲ್ಲಿ ವಿಸ್ತೃತವಾದ ಹೊಸ ಯೋಜನೆ ಸಿದ್ಧಗೊಳ್ಳುತ್ತಿದೆ" ಎಂದು ಮಾಹಿತಿ ನೀಡಿದರು.