ದಕ್ಷಿಣ ಕನ್ನಡ

ಮಂಗಳೂರು: ಕೊಂಕಣ ರೈಲ್ವೆ ವಿಲೀನ: ನಾಲ್ಕು ರಾಜ್ಯಗಳ ಒಪ್ಪಿಗೆ ಅಗತ್ಯ - ಸಚಿವ ಅಶ್ವಿನಿ ವೈಷ್ಣವ್ ಸ್ಪಷ್ಟನೆ



ಮಂಗಳೂರು: ಮಂಗಳೂರು ಮತ್ತು ಬೆಂಗಳೂರು ನಡುವಿನ ರೈಲು ಸಂಪರ್ಕವನ್ನು ಮತ್ತಷ್ಟು ಬಲಪಡಿಸಲು ಹಳಿ ದ್ವಿಪಥ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸ್ಪಷ್ಟಪಡಿಸಿದ್ದಾರೆ.

​ಗುರುವಾರ ರಾತ್ರಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರು–ಬೆಂಗಳೂರು ಮಾರ್ಗದ ಹಳಿ ದ್ವಿಪಥೀಕರಣ ಅತ್ಯಂತ ಮಹತ್ವದ್ದಾಗಿದೆ ಎಂದರು. ಈ ಯೋಜನೆಗೆ ಈಗಾಗಲೇ ಅಂತಿಮ ಸ್ಥಳ ಸಮೀಕ್ಷೆ (ಎಫ್‌ಎಸ್‌ಎಲ್) ಮತ್ತು ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಅನುಮೋದನೆ ನೀಡಲಾಗಿದ್ದು, ಪ್ರಸ್ತುತ ಡಿಪಿಆರ್ ಸಿದ್ಧತೆ ಕಾರ್ಯ ವೇಗವಾಗಿ ಸಾಗುತ್ತಿದೆ ಎಂದು ತಿಳಿಸಿದರು.

​ಪಶ್ಚಿಮ ಘಟ್ಟದಲ್ಲಿ ಸವಾಲಿನ ಕಾಮಗಾರಿ

​ಪಶ್ಚಿಮ ಘಟ್ಟದ ಕಡಿದಾದ ಪ್ರದೇಶದಲ್ಲಿ ರೈಲ್ವೆ ಕಾಮಗಾರಿ ನಡೆಸುವುದು ತಾಂತ್ರಿಕವಾಗಿ ಅತ್ಯಂತ ಸವಾಲಿನ ಕೆಲಸವಾಗಿದೆ. ಮೊದಲ ರೈಲು ಮಾರ್ಗ ನಿರ್ಮಿಸುವಾಗ ಎದುರಾದ ಕಡಿದಾದ ಇಳಿಜಾರಿನ ಸಮಸ್ಯೆಗಳು ಎರಡನೇ ಹಳಿಯಲ್ಲಿ ಮರುಕಳಿಸಬಾರದು ಎಂಬ ಕಾರಣಕ್ಕೆ, ಇಡೀ ಮಾರ್ಗವನ್ನು ಸಾಧಾರಣ ಇಳಿಜಾರು ಇರುವಂತೆ ಮರುವಿನ್ಯಾಸಗೊಳಿಸಲಾಗುತ್ತಿದೆ ಎಂದು ಸಚಿವರು ವಿವರಿಸಿದರು.

​ವಂದೇ ಭಾರತ್ ಸೇವೆಗೆ ಚಾಲನೆ

​ಶುಕ್ರವಾರ ಮಂಗಳೂರು ಮತ್ತು ಬೆಂಗಳೂರು ನಡುವೆ ವಂದೇ ಭಾರತ್ ರೈಲು ಸೇವೆಗೆ ಅಧಿಕೃತ ಚಾಲನೆ ನೀಡಲಾಗುತ್ತಿದೆ. ಇದು ಕರಾವಳಿ ಕರ್ನಾಟಕವನ್ನು ರಾಜಧಾನಿ ಬೆಂಗಳೂರಿನೊಂದಿಗೆ ಬೆಸೆಯುವ ಅತ್ಯಂತ ಮಹತ್ವದ ಸೇವೆಯಾಗಿದೆ. ಘಾಟ್ ಪ್ರದೇಶದ ಕಡಿದಾದ ಹಳಿಗಳು ಹಾಗೂ ವಿದ್ಯುದ್ದೀಕರಣದ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸಿ, ರೈಲಿನಲ್ಲೂ ಅಗತ್ಯ ತಾಂತ್ರಿಕ ಮಾರ್ಪಾಡುಗಳನ್ನು ಮಾಡಿ ಈ ಸೇವೆ ಆರಂಭಿಸಲಾಗುತ್ತಿದೆ. ಇದರೊಂದಿಗೆ ಉಡುಪಿಯಲ್ಲಿ ಎಫ್‌ಎಂ ಟ್ರಾನ್ಸ್‌ಮಿಟರ್‌ಗೂ ಚಾಲನೆ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

​ಕೊಂಕಣ ರೈಲ್ವೆ ವಿಲೀನಕ್ಕೆ ರಾಜ್ಯಗಳ ಒಪ್ಪಿಗೆ ಕಡ್ಡಾಯ

​ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅಶ್ವಿನಿ ವೈಷ್ಣವ್, ವಿಲೀನಕ್ಕೆ ನಾವು ನಿರಂತರ ಪ್ರಯತ್ನ ನಡೆಸುತ್ತಿದ್ದೇವೆ ಎಂದರು. ಆದರೆ ಕೊಂಕಣ ರೈಲ್ವೆ ನಿಗಮವು ಕೇಂದ್ರ ಸರ್ಕಾರದ ಜೊತೆಗೆ ಮಹಾರಾಷ್ಟ್ರ, ಗೋವಾ, ಕರ್ನಾಟಕ ಮತ್ತು ಕೇರಳ ಸರ್ಕಾರಗಳ ಷೇರುಗಳನ್ನು ಹೊಂದಿರುವ ಸಂಸ್ಥೆಯಾಗಿದೆ. ಈ ಎಲ್ಲ ನಾಲ್ಕು ರಾಜ್ಯ ಸರ್ಕಾರಗಳು ಒಪ್ಪಿಗೆ ನೀಡಿದರೆ ಮಾತ್ರ ವಿಲೀನ ಪ್ರಕ್ರಿಯೆ ಸಾಧ್ಯ. ಈ ಕುರಿತು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದ್ದು, ಅವರ ಸಮ್ಮತಿ ಸಿಕ್ಕ ತಕ್ಷಣ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

​ಕರ್ನಾಟಕ ನಿರ್ಲಕ್ಷ್ಯ ಆರೋಪ ತಳ್ಳಿಹಾಕಿದ ಸಚಿವರು

​ಪ್ರಮುಖ ರೈಲ್ವೆ ಯೋಜನೆಗಳಲ್ಲಿ ಕರ್ನಾಟಕವನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ರಾಜ್ಯ ಸಚಿವ ಎಂ.ಬಿ. ಪಾಟೀಲ್ ಅವರ ಆರೋಪವನ್ನು ತಳ್ಳಿಹಾಕಿದ ಅವರು, ಇದು ಸಂಪೂರ್ಣ ಸುಳ್ಳು ಎಂದರು. ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರವೇ ಕರ್ನಾಟಕಕ್ಕೆ ರೈಲ್ವೆ ವಲಯದಲ್ಲಿ ಹೆಚ್ಚಿನ ಅನುದಾನ ಸಿಕ್ಕಿದೆ.

​ಪ್ರಸ್ತುತ ರಾಜ್ಯದಲ್ಲಿ ಸುಮಾರು ₹75,000 ಕೋಟಿ ಮೌಲ್ಯದ ರೈಲ್ವೆ ಯೋಜನೆಗಳು ಪ್ರಗತಿಯಲ್ಲಿವೆ. ಕರ್ನಾಟಕಕ್ಕೆ ಬುಲೆಟ್ ಟ್ರೈನ್ ಯೋಜನೆ, ಹಲವು ವಂದೇ ಭಾರತ್ ರೈಲುಗಳು, ವಂದೇ ಭಾರತ್ ಸ್ಲೀಪರ್ ರೈಲು ಹಾಗೂ ನಿಲ್ದಾಣಗಳ ಪುನರ್ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಕರ್ನಾಟಕಕ್ಕೆ ನೀಡಲಾಗಿದ್ದ ಬಜೆಟ್ ಅನುದಾನ ಎಷ್ಟು ಎಂಬುದನ್ನು ಎಂ.ಬಿ. ಪಾಟೀಲ್ ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಸಚಿವರು ತಿರುಗೇಟು ನೀಡಿದರು.