ಬಂದಾರು: ಬಂದಾರು ಗ್ರಾಮದ ಪೆರ್ಲ-ಬೈಪಾಡಿ ಶ್ರೀ ಸಿದ್ಧಿವಿನಾಯಕ ಯುವಕ ಮಂಡಲದ ವತಿಯಿಂದ ಸೋಣಕುಮೇರು ಸೇತುವೆ ಬಳಿಯಿಂದ ಬೈಪಾಡಿವರೆಗೆ ಮುಖ್ಯರಸ್ತೆಯ ಇಕ್ಕೆಲಗಳಲ್ಲಿದ್ದ ಗಿಡ-ಗಂಟಿಗಳನ್ನು ತೆರವುಗೊಳಿಸುವ ಸ್ವಚ್ಛತಾ ಕಾರ್ಯ ನವೆಂಬರ್ 11ರಂದು ಯಶಸ್ವಿಯಾಗಿ ನಡೆಯಿತು.
ರಸ್ತೆಯ ಇಕ್ಕೆಲಗಳಲ್ಲಿ ಹುಲ್ಲು ಮತ್ತು ಗಿಡಗಳು ದಟ್ಟವಾಗಿ ಬೆಳೆದಿದ್ದರಿಂದ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ವಾಹನ ಸವಾರರು ಓಡಾಡಲು ತೀವ್ರ ತೊಂದರೆಯಾಗುತ್ತಿತ್ತು. ಇದನ್ನು ಮನಗಂಡ ಯುವಕ ಮಂಡಲದ ಸದಸ್ಯರು ಒಟ್ಟಾಗಿ ಶ್ರಮದಾನದ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ.
ಈ ಸಮಾಜಮುಖಿ ಕಾರ್ಯದಲ್ಲಿ ಶಶಿಧರ ಬಾಲಂಪಾಡಿ, ಸಂಪತ್ ಕರ್ಲೊಡಿ, ಲೋಹಿತ್ ಸೋಣಕುಮೇರು, ಪ್ರವೀಣ್ ಬಾಲಂಪಾಡಿ, ನವೀನ್ ಪ್ರಕಾಶ್ ಕರ್ಲೊಡಿ, ಕುಶಾಲಪ್ಪ ಸೋಣಕುಮೇರು, ರಾಧಾಕೃಷ್ಣ ಪಾರೋಟ್ಟು, ಸತೀಶ್ ಬಾಲಾಂಪಾಡಿ, ಚಿದಾನಂದ ಬಾಲಂಪಾಡಿ, ಚೀತ್ರೇಶ್ ಬಾಲಂಪಾಡಿ, ಕೀರ್ತನ್ ಬಾಲಾಂಪಾಡಿ ಹಾಗೂ ರಾಕೇಶ್ ಸೋಣಕುಮೇರು ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಹುಲ್ಲು ಕತ್ತರಿಸುವ ಯಂತ್ರಕ್ಕೆ ಪೆಟ್ರೋಲ್ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ, ಶ್ರಮದಾನದಲ್ಲಿ ತೊಡಗಿಸಿಕೊಂಡವರಿಗೆ ಊರಿನ ಪ್ರಮುಖರು ಜ್ಯೂಸ್ ಹಾಗೂ ಸಿಹಿತಿಂಡಿ ನೀಡಿ ಪ್ರೋತ್ಸಾಹಿಸಿದರು. ಯುವಕರ ಈ ಉತ್ತಮ ಕಾರ್ಯಕ್ಕೆ ಸ್ಥಳೀಯ ನಾಗರಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

