ಕ್ರೈಂ

ಬಂಟ್ವಾಳ: ಮನೆ ಕಳ್ಳತನ ಪ್ರಕರಣ; ನ್ಯಾಯಾಲಯಕ್ಕೆ ಶರಣಾದ ಓರ್ವ ಆರೋಪಿ, ಪೊಲೀಸ್ ಕಸ್ಟಡಿಗೆ



​ಬಂಟ್ವಾಳ: ಬಾಳ್ತಿಲ ಗ್ರಾಮದ ಕಾಂಪ್ರಬೈಲು ಪ್ರದೇಶದಲ್ಲಿ ನಡೆದಿದ್ದ ಬಹುಚರ್ಚಿತ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿ ನ್ಯಾಯಾಲಯಕ್ಕೆ ಶರಣಾಗಿದ್ದು, ಪೊಲೀಸರು ಹೆಚ್ಚಿನ ತನಿಖೆಗಾಗಿ ಆತನನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.

​ಕಾಂಪ್ರಬೈಲು ನಿವಾಸಿ ಸತೀಶ್ ಶೆಣೈ ಅವರು ಫೆಬ್ರವರಿ 4ರಂದು ಸಂಜೆ ಮನೆಯನ್ನು ಲಾಕ್ ಮಾಡಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ರಾತ್ರಿ ವಾಪಸ್ ಬಂದು ನೋಡಿದಾಗ ಮನೆಯ ಹಿಂಬದಿಯ ಬಾಗಿಲು ಮುರಿದಿರುವುದು ಗಮನಕ್ಕೆ ಬಂದಿದೆ. ಒಳಗೆ ಹೋಗಿ ಪರಿಶೀಲಿಸಿದಾಗ, ಕೊಠಡಿಯ ಲಾಕರ್‌ನಲ್ಲಿಟ್ಟಿದ್ದ ಅಂದಾಜು 8 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 5 ಸಾವಿರ ರೂಪಾಯಿ ನಗದು ಕಳವಾಗಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿತ್ತು.

​ಈ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಬಂಟ್ವಾಳದ ಕೊಲ್ನಾಡು ನಿವಾಸಿ 21 ವರ್ಷದ ಮೊಹಮ್ಮದ್ ಮಿಸ್ಟಾ ಎಂಬಾತ ನವೆಂಬರ್ 11ರಂದು ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ಬಳಿಕ ಕೃತ್ಯದಲ್ಲಿ ಭಾಗಿಯಾದ ಇತರರ ಮಾಹಿತಿ ಹಾಗೂ ಕಳವು ಮಾಡಿರುವ ಚಿನ್ನಾಭರಣಗಳ ಪತ್ತೆಗಾಗಿ ಪೊಲೀಸರು ಆತನನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.