ಮಂಗಳೂರು: ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿಯುವ ಆತಂಕದಲ್ಲಿದ್ದ ವಿಶೇಷ ಚೇತನರ ಬದುಕಿಗೆ ಆಸರೆಯಾಗುವ ನಿಟ್ಟಿನಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರ ವಿಶೇಷ ಮುತುವರ್ಜಿಯಿಂದ ಕೃತಕ ಅಂಗಾಂಗ ಸಲಕರಣೆಗಳ ವಿತರಣಾ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ.
ಮಂಗಳೂರಿನ ಪಣಂಬೂರಿನಲ್ಲಿರುವ ಪಿ.ಪಿ.ಎಲ್ (PPL) ಸಂಸ್ಥೆಯ ಸಹಕಾರದೊಂದಿಗೆ ಹಾಗೂ ಸಿ.ಎಸ್.ಆರ್ (CSR) ಅನುದಾನದಡಿ ಈ ಅರ್ಥಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೃತಕ ಅಂಗಾಂಗಗಳನ್ನು ವಿತರಿಸಿ ಮಾತನಾಡಿದ ಶಾಸಕ ಡಾ. ವೈ. ಭರತ್ ಶೆಟ್ಟಿ, "ವಿಶೇಷ ಚೇತನರ ಬದುಕಿನಲ್ಲಿ ಹೊಸ ಭರವಸೆ ಮೂಡಿಸುವುದು ಹಾಗೂ ಅವರು ಯಾವುದೇ ಕಷ್ಟವಿಲ್ಲದೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗುವುದು ನಮ್ಮೆಲ್ಲರ ಹೊಣೆ. ಈ ಯೋಜನೆಯಿಂದ ಅವರು ಆತ್ಮವಿಶ್ವಾಸದೊಂದಿಗೆ ತಮ್ಮ ದೈನಂದಿನ ಚಟುವಟಿಕೆಗಳನ್ನು ಸಹಜವಾಗಿ ನಡೆಸುತ್ತಿರುವುದನ್ನು ನೋಡಿ ಮನಸ್ಸಿಗೆ ಅತೀವ ಸಂತೃಪ್ತಿಯಾಗಿದೆ" ಎಂದು ತಿಳಿಸಿದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಜತೆಗೆ ಇಂತಹ ಸಂಘ-ಸಂಸ್ಥೆಗಳ ಸೌಲಭ್ಯಗಳು ತಲುಪಬೇಕು ಎಂಬುದು ನಮ್ಮ ಆಶಯ. ಈ ನಿಟ್ಟಿನಲ್ಲಿ ಇಂತಹ ಜನಪರ ಹಾಗೂ ಸಮಾಜಮುಖಿ ಕಾರ್ಯಗಳನ್ನು ಮುಂದೆಯೂ ಮುಂದುವರಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಿ. ವೇದವ್ಯಾಸ್ ಕಾಮತ್ ಹಾಗೂ ಪಿ.ಪಿ.ಎಲ್ ಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದು, ವಿಶೇಷ ಚೇತನರಿಗೆ ಸಾಂತ್ವನ ಹೇಳಿದರು.

