ದಕ್ಷಿಣ ಕನ್ನಡ

ಸುರತ್ಕಲ್: ಬೌದ್ಧಿಕ ವಿಕಾಸದೊಂದಿಗೆ ಮನುಜಕುಲದ ಉದ್ಧಾರ ಸಾಧ್ಯ: ಶಾಸಕ ಡಾ. ವೈ. ಭರತ್ ಶೆಟ್ಟಿ



​ಸುರತ್ಕಲ್: ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಅವರ ಬೌದ್ಧಿಕ ವಿಕಾಸಕ್ಕೆ ದಾರಿ ಮಾಡಿಕೊಡುವುದರ ಜೊತೆಗೆ ರಾಷ್ಟ್ರೀಯ ಏಕತೆ ಮತ್ತು ಸಾಮಾಜಿಕ ಸಾಮರಸ್ಯವನ್ನು ಮೂಡಿಸಲು ಸಹಕಾರಿಯಾಗಿದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

​ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಮಂಗಳೂರು ಹಾಗೂ ಗೋವಿಂದದಾಸ ಪದವಿ ಪೂರ್ವ ಕಾಲೇಜು, ಸುರತ್ಕಲ್ ಇವರ ಸಂಯುಕ್ತ ಆಶ್ರಯದಲ್ಲಿ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಯುವಜನರು ಇಂತಹ ವೇದಿಕೆಗಳನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

​ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಉಪನಿರ್ದೇಶಕಿ ರಾಜೇಶ್ವರಿ ಎಚ್.ಎಚ್., ವಿದ್ಯಾರ್ಥಿಗಳು ಜೀವನದಲ್ಲಿ ತಾಳ್ಮೆ ಮತ್ತು ಸತತ ಪ್ರಯತ್ನದಿಂದ ಮುನ್ನಡೆಯಬೇಕು. ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ಜಿಲ್ಲೆಗೆ ಕೀರ್ತಿ ತರುವಲ್ಲಿ ಮುಂದಾಗಬೇಕು ಎಂದು ಸಲಹೆ ನೀಡಿದರು.

​


ಮುಖ್ಯ ಅತಿಥಿಗಳಾಗಿ ಹಿಂದು ವಿದ್ಯಾದಾಯಿನೀ ಸಂಘದ ಉಪಾಧ್ಯಕ್ಷ ರಮೇಶ್ ಟಿ.ಎನ್., ಕಾರ್ಯದರ್ಶಿ ಶ್ರೀರಂಗ ಎಚ್. ಹಾಗೂ ಆಡಳಿತ ನಿರ್ದೇಶಕ ಮುರಾರಿ ರಾವ್ ಎಚ್. ಭಾಗವಹಿಸಿ ಶುಭಾಶಂಸನೆಗೈದರು. ಸಾಂಸ್ಕೃತಿಕ ಸ್ಪರ್ಧೆಯ ಸಂಚಾಲಕಿ ಡಾ. ಪಲ್ಲವಿ ಕಾರ್ಯಕ್ರಮದ ರೂಪುರೇಷೆ ಹಾಗೂ ನಿಯಮಗಳನ್ನು ವಿವರಿಸಿದರು.

​ಕಾಲೇಜಿನ ಪ್ರಾಂಶುಪಾಲೆ ಲಕ್ಷ್ಮೀ ಪಿ. ಸ್ವಾಗತಿಸಿದರೆ, ಸಹ ಸಂಚಾಲಕ ವೆಂಕಟರಮಣ ಕಾರ್ಯಕ್ರಮ ನಿರೂಪಿಸಿದರು. ಉಪಪ್ರಾಂಶುಪಾಲೆ ಸುನೀತಾ ಕೆ. ವಂದನಾರ್ಪಣೆಗೈದರು.