ಉಡುಪಿ: ತಾಯಿಯ ಅಂತಿಮ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲು ಭೂಗತ ಪಾತಕಿ ರವಿ ಪೂಜಾರಿಯನ್ನು ಪೊಲೀಸರು ಬಿಗಿ ಭದ್ರತೆಯಲ್ಲಿ ಶನಿವಾರ ಮಲ್ಪೆಗೆ ಕರೆತಂದಿದ್ದಾರೆ.
ರವಿ ಪೂಜಾರಿಯವರ ತಾಯಿ ಸುಶೀಲಾ ಪೂಜಾರ್ತಿ (86) ಅವರು ಗುರುವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದರು. ಮೃತರಿಗೆ ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದಾರೆ.
ಶನಿವಾರ ಮಲ್ಪೆಯ ನೆರ್ಗಿಯಲ್ಲಿರುವ ಅವರ ಮೂಲ ಮನೆಯಲ್ಲಿ ಸುಶೀಲಾ ಪೂಜಾರ್ತಿಯವರ ಅಂತ್ಯಸಂಸ್ಕಾರ ನೆರವೇರಲಿದೆ. ನ್ಯಾಯಾಲಯದ ಷರತ್ತುಬದ್ಧ ಅನುಮತಿ ಪಡೆದು, ಬೆಂಗಳೂರು ಪೊಲೀಸರ ಎಸ್ಕಾರ್ಟ್ ಭದ್ರತೆಯಲ್ಲಿ ರವಿ ಪೂಜಾರಿಯನ್ನು ಕರೆತರಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲು ಉಡುಪಿ ಜಿಲ್ಲಾ ಪೊಲೀಸರಿಂದ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
