ದಕ್ಷಿಣ ಕನ್ನಡ

ಉಜಿರೆ: ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಭ್ರಮದ ಮಕ್ಕಳ ದಿನಾಚರಣೆ



ಉಜಿರೆ: ಸ್ಥಳೀಯ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಅತ್ಯಂತ ಸಡಗರ ಮತ್ತು ಉತ್ಸಾಹದಿಂದ ಆಚರಿಸಲಾಯಿತು.

​ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಸಂಚಾಲಕ ವಂದನೀಯ ಫಾ. ಅಬೆಲ್ ಲೋಬೊ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರಭಾತ್ ಸ್ಕೋರ್ ಮಾಲಕ ಪ್ರವೀಣ್ ಭಟ್ ಭಾಗವಹಿಸಿದ್ದರು. ಶಾಲೆಯ ಪ್ರಾಂಶುಪಾಲ ವಂದನೀಯ ಫಾ. ಡಾ. ವಿಜಯ್ ಲೋಬೊ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಪ್ರವೀಣ್ ವಿಜಯ್ ಡಿಸೋಜಾ, ಕಾರ್ಯದರ್ಶಿ ಮರ್ಲಿನ್ ಮೆನೇಜಸ್, ಶಾಲಾ ಅಭಿವೃದ್ಧಿ ಮಂಡಳಿಯ ಸದಸ್ಯರಾದ ಸ್ಟೀವನ್ ಮೊಂತೇರೊ ಹಾಗೂ ಬಬಿತಾ ಮೋರಸ್ ಹಾಗೂ ಶಾಲಾ ವಿದ್ಯಾರ್ಥಿ ನಾಯಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

​ಈ ವೇಳೆ ಮಾತನಾಡಿದ ಮುಖ್ಯ ಅತಿಥಿ ಪ್ರವೀಣ್ ಭಟ್, ಮಕ್ಕಳು ಪ್ರಕೃತಿಯನ್ನು ಪ್ರೀತಿಸುವುದರ ಜತೆಗೆ ಅದರ ಸಂರಕ್ಷಣೆ ಮತ್ತು ಪೋಷಣೆಯ ಮಹತ್ವವನ್ನು ಅರಿತುಕೊಳ್ಳಬೇಕು. ಬಾಲ್ಯದಿಂದಲೇ ಪ್ರಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿಯುತ ಮನೋಭಾವವನ್ನು ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

​ಮತ್ತೋರ್ವ ಅತಿಥಿ ಮರ್ಲಿನ್ ಮೆನೇಜಸ್ ಮಾತನಾಡಿ, ಮಕ್ಕಳ ಜೀವನದಲ್ಲಿ ಶಿಸ್ತು ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಬಾಲ್ಯದಲ್ಲೇ ಶಿಸ್ತಿನ ಅಭ್ಯಾಸ ಮಾಡಿಕೊಂಡರೆ ಅದು ಮುಂದಿನ ಭವಿಷ್ಯಕ್ಕೆ ಭದ್ರವಾದ ದಾರಿದೀಪವಾಗುತ್ತದೆ ಎಂದು ತಿಳಿಸಿದರು.

​ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಸಂಚಾಲಕ ವಂದನೀಯ ಫಾ. ಅಬೆಲ್ ಲೋಬೊ, ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯದ ಹಾರೈಕೆಗಳೊಂದಿಗೆ ಮಕ್ಕಳ ದಿನಾಚರಣೆಯ ಮಹತ್ವವನ್ನು ವಿವರಿಸಿ ಸಂದೇಶ ನೀಡಿದರು. ಇದೇ ವೇಳೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿ ಗೌರವಿಸಲಾಯಿತು.

​ಕಾರ್ಯಕ್ರಮದ ಆರಂಭದಲ್ಲಿ ಸಹಶಿಕ್ಷಕಿ ಜೋಯ್ಸಿ ಸ್ವಾಗತಿಸಿದರು. ಸಹಶಿಕ್ಷಕಿ ತೇಜಸ್ವಿನಿ ಕಾರ್ಯಕ್ರಮ ನಿರೂಪಿಸಿ, ಸಹಶಿಕ್ಷಕಿ ನಿಶಾ ವಂದನಾರ್ಪಣೆ ಸಲ್ಲಿಸಿದರು. ಮಕ್ಕಳ ನಗು, ಹರ್ಷೋದ್ಗಾರ ಹಾಗೂ ವಿವಿಧ ಸಾಂಸ್ಕೃತಿಕ ಉತ್ಸಾಹದೊಂದಿಗೆ ಕಾರ್ಯಕ್ರಮವು ಅರ್ಥಪೂರ್ಣವಾಗಿ ಸಂಪನ್ನಗೊಂಡಿತು.