ದಕ್ಷಿಣ ಕನ್ನಡ

ನಡ್ವಾಲ್: ನಡ್ವಾಲ್ ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ವಿಜೃಂಭಣೆಯ ದೀಪಾವಳಿ ಆಚರಣೆ



ನಡ್ವಾಲ್: ಇತಿಹಾಸ ಪ್ರಸಿದ್ಧ ಸಿರಿಗಳ ಆಲಡೆ ಕ್ಷೇತ್ರವೆಂದೇ ಖ್ಯಾತಿ ಪಡೆದಿರುವ ನಡ್ವಾಲ್ ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ದೀಪಾವಳಿ ಹಬ್ಬವನ್ನು ಈ ಬಾರಿ ಅದ್ಧೂರಿ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು.

​ಹಬ್ಬದ ಅಂಗವಾಗಿ ನವೆಂಬರ್ 9ರಂದು ಬೆಳಿಗ್ಗೆ ಸಾಂಪ್ರದಾಯಿಕ ಬುಳೆಕ್ಕಿ ಮರಕ್ಕೆ ವಿಶೇಷ ಪೂಜೆ ನೆರವೇರಿಸುವ ಮೂಲಕ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಮುಂದುವರಿದು, ವಿಧಿವಿಧಾನಗಳೊಂದಿಗೆ ಬಲಿಯೇಂದ್ರ ಪೂಜೆಯನ್ನು ಶ್ರದ್ಧೆಯಿಂದ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ದೇವಸ್ಥಾನದ ವಿಲಯದವರಿಗೆ ದೇವಸ್ಥಾನದ ವತಿಯಿಂದ ಅಕ್ಕಿ, ತೆಂಗಿನಕಾಯಿ, ಅವಲಕ್ಕಿ, ತೆಂಗಿನೆಣ್ಣೆ ಹಾಗೂ ಗೌರವಧನವನ್ನು ನೀಡಿ ಸನ್ಮಾನಿಸಲಾಯಿತು.

​ದೀಪಾವಳಿ ಪ್ರಯುಕ್ತ ಶ್ರೀ ಲೋಕನಾಥೇಶ್ವರ ದೇವರಿಗೆ ಹಾಗೂ ಪರಿವಾರ ದೈವ ದೇವರುಗಳಿಗೆ ವಿಶೇಷ ಪೂಜೆಗಳು ಮತ್ತು ಹೂವಿನ ಅಲಂಕಾರಗಳನ್ನು ಮಾಡಲಾಗಿತ್ತು. ವಿಶೇಷವೆಂದರೆ, ನೂರಾರು ಸಂಖ್ಯೆಯಲ್ಲಿ ಆಗಮಿಸಿದ ವಾಹನಗಳಿಗೆ ಭಕ್ತಿಪೂರ್ವಕವಾಗಿ ವಾಹನ ಪೂಜೆ ನೆರವೇರಿಸಲಾಯಿತು.

​


ಕಾರ್ಯಕ್ರಮದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗುರುರಾಜ್ ಗುರಿಪಳ್ಳ, ಅರ್ಚಕ ಮಾಧವ ಶರ್ಮ, ಮಾಜಿ ಅಧ್ಯಕ್ಷ ಸುಂದರ ಪೂಜಾರಿ, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಗೌಡ ಹಾಗೂ ಸಮಿತಿ ಸದಸ್ಯರಾದ ಯಶೋಧರ ಗೌಡ ಮತ್ತು ಪ್ರಸಾದ್ ಕುಮಾರ್ ಉಪಸ್ಥಿತರಿದ್ದರು.

​


ಹಾಗೆಯೇ, ದೇವಸ್ಥಾನದ ವಿಲಯದವರಾದ ಬೊಂಟ್ರ ಚೆನ್ನ ಪೂಜಾರಿ, ಜಯಪ್ರಕಾಶ್ ಶೆಟ್ಟಿ ಗುತ್ತಿಲಾರಬೆಟ್ಟು, ಮೂಲಕುಮಾರ ಭದ್ರಯ್ಯ ಪೂಜಾರಿ, ಸ್ಥಳ ಕುಮಾರ ವೆಂಕಪ್ಪ ಶೆಟ್ಟಿ, ಸಿರಿಪಾತ್ರಿ ವಾರಿಜ, ಸೋಮ ಕಾಪ, ಶೇಖರ ಆಚಾರಿ, ನಾರಾಯಣ ಮಡಿವಾಳ, ಜಗದೀಶ ದೇವಾಡಿಗ ಸೇರಿದಂತೆ ಊರಿನ ಹಾಗೂ ಪರವೂರುಗಳಿಂದ ಬಂದಿದ್ದ ನೂರಾರು ಭಕ್ತರು ದೀಪಾವಳಿ ಉತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.