ಚಿತ್ರ- ವಿಠಲ ಗೌಡ
ಮಂಗಳೂರು : ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಒಂದು ತಿಂಗಳ ಕಾರಾಗೃಹ ಶಿಕ್ಷೆಗೆ ಒಳಗಾದ ಬಳಿಕ ತಲೆ ಮರೆಸಿಕೊಂಡಿರುವ ಧರ್ಮಸ್ಥಳ ಗ್ರಾಮದ ಪಾಂಗಳ ನಿವಾಸಿ, ಅತ್ಯಾಚಾರಕ್ಕೀಡಾಗಿ ಕೊಲೆಯಾದ ಸೌಜನ್ಯಾಳ ಮಾವ ವಿಠಲ ಗೌಡರ ಬಂಧನಕ್ಕೆ ಪೊಲೀಸರು ಜೂನ್ 27ರಂದು ಬೆಳ್ತಂಗಡಿ ತಾಲೂಕಿನ ವಿವಿಧೆಡೆ ವ್ಯಾಪಕ ಶೋಧ ನಡೆಸಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಕುರಿತು ಅವಹೇಳನಕಾರಿಯಾಗಿ ಮಾತನಾಡದಂತೆ ನ್ಯಾಯಾಲಯ ನಿರ್ಬಂಧ ವಿಧಿಸಿದ್ದರೂ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಮಾತನಾಡಿದ ಆರೋಪದಲ್ಲಿ ವಿಠಲ ಗೌಡರಿಗೆ ಬೆಂಗಳೂರು ನ್ಯಾಯಾಲಯ ಒಂದು ತಿಂಗಳ ಸಜೆ ವಿಧಿಸಿ ನಾಲ್ಕು ತಿಂಗಳ ಹಿಂದೆ ಆದೇಶ ನೀಡಿತ್ತು. ಬಳಿಕ ತಲೆಮರೆಸಿರುವ ವಿಠಲ ಗೌಡ ಸ್ಥಳೀಯ ಪೋಲೀಸರಿಗೂ ಸಿಗದೆ ತಲೆಮರೆಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿಠಲ ಗೌಡರನ್ನು ಬಂಧಿಸಲು ಜೂ.27ರಂದು ಬೆಂಗಳೂರಿನಿಂದ ನ್ಯಾಯಾಲಯದ ಅಧಿಕಾರಿಗಳೊಂದಿಗೆ ಆಗಮಿಸಿರುವ ಪೊಲೀಸರು ವಿವಿಧೆಡೆ ಶೋಧ ನಡೆಸಿದ್ದಾರೆ.
ವಿಠಲ ಗೌಡ ಅವರ ಮನೆ, ಕುಸುಮಾವತಿಯವರ ಮನೆ ಮಹೇಶ್ ಶೆಟ್ಟಿ ತಿಮರೋಡಿ ಮನೆ ಸಹಿತ ಹಲವೆಡೆ ಶೋಧ ನಡೆಸಿ ವಿಠಲ ಗೌಡರ ಬಂಧನಕ್ಕೆ ಪ್ರಯತ್ನನಡೆಸಿದ್ದಾರೆ. ನ್ಯಾಯಾಲಯದ ಆದೇಶ ಪ್ರಶ್ನಿಸಿ ವಿಠಲ ಗೌಡ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವುದಾಗಿ ತಿಳಿದು ಬಂದಿದ್ದು, ಇದರ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ.
