ಇಂಡಿಯನ್ ಪ್ರೀಮಿಯರ್ ಲೀಗ್ (IPL) 2027ರ ಸೀಸನ್ ಆರಂಭಕ್ಕೂ ಮುನ್ನವೇ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಟೂರ್ನಿ ಆರಂಭಕ್ಕೆ ಇನ್ನೂ ದಿನಗಳ ಬಾಕಿ ಇರುವಾಗಲೇ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವೆ ದೊಡ್ಡ ಆಟಗಾರರ ಅದಲು-ಬದಲು (Trade Deal) ಒಪ್ಪಂದ ನಡೆದಿದೆ.
ಕಳೆದ ಎರಡು ಸೀಸನ್‌ಗಳಲ್ಲಿ ಲಕ್ನೋ ತಂಡದ ಭಾಗವಾಗಿದ್ದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ತಮ್ಮ ಹಳೆಯ ಮನೆ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳಿದ್ದರೆ, ಡೆಲ್ಲಿಯಲ್ಲಿದ್ದ ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ ಈಗ ಲಕ್ನೋ ಸೂಪರ್ ಜೈಂಟ್ಸ್ ಪಾಳಯ ಸೇರಿದ್ದಾರೆ. ಎರಡೂ ಫ್ರಾಂಚೈಸಿಗಳು ತಮ್ಮ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ಬಿಗ್ ಡೀಲ್ ಅನ್ನು ಖಚಿತಪಡಿಸಿವೆ.
ಪಂತ್‌ಗೆ ಭಾರಿ ಆರ್ಥಿಕ ನಷ್ಟ! ವೇತನದಲ್ಲಿ 12 ಕೋಟಿ ಕಡಿತ
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ರಿಷಭ್ ಪಂತ್ ಅವರನ್ನು ಬರೋಬ್ಬರಿ 27 ಕೋಟಿ ರೂ. ನೀಡಿ ಖರೀದಿಸುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರನನ್ನಾಗಿ ಮಾಡಿತ್ತು. ಆದರೆ, ಇದೀಗ ಹೊಸ ಒಪ್ಪಂದದ ಪ್ರಕಾರ ಡೆಲ್ಲಿ ಕ್ಯಾಪಿಟಲ್ಸ್ ಸೇರಿರುವ ಪಂತ್ ಅವರ ವೇತನದಲ್ಲಿ ಭಾರಿ ಕಡಿತವಾಗಿದೆ. ಡೆಲ್ಲಿ ತಂಡ ಅವರಿಗೆ 15 ಕೋಟಿ ರೂ. ಪಾವತಿಸಲಿದ್ದು, ಈ ಟ್ರೇಡಿಂಗ್‌ನಿಂದಾಗಿ ಪಂತ್ ಬರೋಬ್ಬರಿ 12 ಕೋಟಿ ರೂ. ಕಳೆದುಕೊಂಡಿದ್ದಾರೆ. ಮತ್ತೊಂದೆಡೆ, ಲಕ್ನೋ ತಂಡ ಸೇರಿದ ಕುಲದೀಪ್ ಯಾದವ್ 13.50 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ.
ಲಕ್ನೋ ತಂಡದ ಕಳಪೆ ಪ್ರದರ್ಶನವೇ ಕಾರಣ?
ಕಳೆದ ಸೀಸನ್‌ನ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. ಆಡಿದ 14 ಪಂದ್ಯಗಳಲ್ಲಿ ಕೇವಲ 4 ರಲ್ಲಿ ಜಯಗಳಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿತ್ತು. ಈ ಹಿನ್ನೆಲೆಯಲ್ಲಿ ಟೂರ್ನಿ ಮುಗಿದ ಬೆನ್ನಲ್ಲೇ ಪಂತ್ ನಾಯಕತ್ವದಿಂದ ಕೆಳಗಿಳಿದಿದ್ದರು. ಅವರು ತಂಡ ತೊರೆಯಲಿದ್ದಾರೆ ಎಂಬ ಊಹಾಪೋಹಗಳಿಗೆ ಈಗ ಅಧಿಕೃತ ಮುದ್ರೆ ಬಿದ್ದಿದೆ.
ಪಂತ್ ನಾಯಕತ್ವದಲ್ಲಿ ಲಕ್ನೋ ತಂಡ ಕಳೆದ ಎರಡು ಸೀಸನ್‌ಗಳಲ್ಲಿ ಕೇವಲ 10 ಪಂದ್ಯಗಳನ್ನು ಗೆಲ್ಲಲಷ್ಟೇ ಶಕ್ತವಾಗಿತ್ತು. 2025ರಲ್ಲಿ 6 ಗೆಲುವು ಸಾಧಿಸಿದರೂ ಪ್ಲೇಆಫ್ ತಲುಪಲು ವಿಫಲವಾಗಿತ್ತು. ನಾಯಕತ್ವದ ಜೊತೆಗೆ ಬ್ಯಾಟಿಂಗ್‌ನಲ್ಲೂ ಪಂತ್ ನಿರೀಕ್ಷಿತ ಫಾರ್ಮ್ ಕಾಣದೆ, ಕಳೆದ ಸೀಸನ್‌ನಲ್ಲಿ 269 ರನ್ ಹಾಗೂ ಈ ಬಾರಿ 312 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.
ಕುಲದೀಪ್ ಯಾದವ್ ಮೇಲೆ ಲಕ್ನೋ ಭರವಸೆ:
ಇತ್ತೀಚಿನ ಐಪಿಎಲ್ 2026ರ ಸೀಸನ್‌ನಲ್ಲಿ ಡೆಲ್ಲಿ ಪರ ಆಡಿದ್ದ ಸ್ಪಿನ್ನರ್ ಕುಲದೀಪ್ ಯಾದವ್ 12 ಪಂದ್ಯಗಳಲ್ಲಿ 10 ವಿಕೆಟ್ ಕಬಳಿಸಿದ್ದರು. ಇದೀಗ ಲಕ್ನೋ ತಂಡವು ಸ್ಪಿನ್ ವಿಭಾಗವನ್ನು ಬಲಪಡಿಸಲು ಕುಲದೀಪ್ ಅವರನ್ನು ನೆಚ್ಚಿಕೊಂಡಿದ್ದು, ಹೊಸ ಸೀಸನ್‌ನಲ್ಲಿ ಇಬ್ಬರೂ ಆಟಗಾರರು ತಮ್ಮ ಹೊಸ ಜರ್ಸಿಯಲ್ಲಿ ಹೇಗೆ ಅಬ್ಬರಿಸಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.
