ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್, ಒಂದು ವರ್ಷದೊಳಗೆ ಮತ್ತೆ ಜಾಮೀನು ಅರ್ಜಿ ಸಲ್ಲಿಸದಂತೆ ಸುಪ್ರೀಂ ಕೋರ್ಟ್ ವಿಧಿಸಿರುವ ನಿರ್ಬಂಧವನ್ನು ಸಡಿಲಿಸುವಂತೆ ಕೋರಿ ಮಂಗಳವಾರ ದೇಶದ ಅತ್ಯುನ್ನತ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ.
ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್, 2025ರ ಆಗಸ್ಟ್‌ನಿಂದ ನಿರಂತರವಾಗಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮೇ 15ರಂದು ಸುಪ್ರೀಂ ಕೋರ್ಟ್‌ನಲ್ಲಿ ರಿಟ್ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ, ಪ್ರಕರಣದ ವಿಚಾರಣೆಯ ಪ್ರಗತಿಯನ್ನು ಗಮನಿಸಿದ ನ್ಯಾಯಾಲಯ, ಒಂದು ವರ್ಷದೊಳಗೆ ವಿಚಾರಣೆಯಲ್ಲಿ ಗಮನಾರ್ಹ ಪ್ರಗತಿಯಾಗದಿದ್ದರೆ ಮತ್ತೆ ಜಾಮೀನು ಕೋರಿ ಅರ್ಜಿ ಸಲ್ಲಿಸಲು ಅವಕಾಶ ನೀಡಿತ್ತು. ಇದನ್ನು ಉಲ್ಲೇಖಿಸಿ, ದರ್ಶನ್ ಪರ ವಕೀಲರು ಹೊಸ ಮೇಲ್ಮನವಿ ಸಲ್ಲಿಸಿದ್ದಾರೆ.
ವಿಚಾರಣೆ ವಿಳಂಬದ ಬಗ್ಗೆ ಕಳವಳ:
ದರ್ಶನ್ ಪರ ವಕೀಲರು ಸಲ್ಲಿಸಿರುವ ಅರ್ಜಿಯಲ್ಲಿ, ಪ್ರಕರಣದ ವಿಚಾರಣೆ ಪ್ರಕ್ರಿಯೆಯಲ್ಲಿ ಆಗುತ್ತಿರುವ ಗಣನೀಯ ವಿಳಂಬದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಾಸಿಕ್ಯೂಷನ್ ಒಟ್ಟು 262 ಸಾಕ್ಷಿಗಳ ವಿಚಾರಣೆ ನಡೆಸುವುದಾಗಿ ತಿಳಿಸಿದೆಯಾದರೂ, ಇದುವರೆಗೆ ಕೇವಲ ಇಬ್ಬರು ಸಾಕ್ಷಿಗಳ ವಿಚಾರಣೆ ಮಾತ್ರ ನಡೆದಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
"ತ್ವರಿತ ವಿಚಾರಣೆಯ ಬಗ್ಗೆ ಈ ನ್ಯಾಯಾಲಯವು ಕಳೆದ ಮೇ ತಿಂಗಳಲ್ಲೇ ಕಳವಳ ವ್ಯಕ್ತಪಡಿಸಿತ್ತು. ಆದರೂ, ಆ ಆದೇಶದ ನಂತರ ಇಬ್ಬರು ಔಪಚಾರಿಕ ಅಥವಾ ಮಹಜರ್ ಸಾಕ್ಷಿಗಳನ್ನು ಮಾತ್ರ ವಿಚಾರಣೆ ನಡೆಸಲಾಗಿದೆ. ಯಾವುದೇ ಪ್ರಮುಖ ಸಾಕ್ಷಿ, ಪ್ರತ್ಯಕ್ಷ ಸಾಕ್ಷಿ, ದೂರುದಾರರು, ತನಿಖಾಧಿಕಾರಿ ಅಥವಾ ಇತರ ನಿರ್ಣಾಯಕ ಸಾಕ್ಷಿಗಳ ವಿಚಾರಣೆ ನಡೆದಿಲ್ಲ" ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಜೈಲು ಅಧಿಕಾರಿಗಳಿಗೆ ಸೂಚನೆ:
ನ್ಯಾಯಾಂಗ ಬಂಧನದಲ್ಲಿದ್ದರೂ ದರ್ಶನ್ ಅವರು ನ್ಯಾಯಾಲಯದ ಎಲ್ಲಾ ನಿರ್ದೇಶನಗಳನ್ನು ಪಾಲಿಸಿದ್ದಾರೆ ಮತ್ತು ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ವಕೀಲರು ಅರ್ಜಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ವಿಚಾರಣೆಗೆ ಹಾಜರಾಗುವುದರಲ್ಲಿ ವಿಳಂಬ ಮಾಡಿಲ್ಲ ಅಥವಾ ವಿಚಾರಣೆಯ ಪ್ರಗತಿಗೆ ಅಡ್ಡಿಪಡಿಸಲು ಯಾವುದೇ ಪ್ರಯತ್ನ ನಡೆಸಿಲ್ಲ ಎಂದು ಅವರು ತಿಳಿಸಿದ್ದಾರೆ.
ಪ್ರಕರಣದ ವಿಚಾರಣೆ ಸುದೀರ್ಘ ಕಾಲದವರೆಗೆ ಮುಂದುವರಿಯುವ ಸಾಧ್ಯತೆಯನ್ನು ಅರ್ಜಿಯಲ್ಲಿ ಎತ್ತಿ ತೋರಿಸಲಾಗಿದ್ದು, ದರ್ಶನ್ ಅವರ ಸುದೀರ್ಘ ಜೈಲು ವಾಸದ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿದೆ. ಒಂದು ವರ್ಷದ ನಂತರ ಮತ್ತೆ ಜಾಮೀನು ಅರ್ಜಿ ಸಲ್ಲಿಸಬಹುದಾಗಿದೆ ಎಂಬ ಆದೇಶವನ್ನು ದರ್ಶನ್ ಗೌರವಿಸುತ್ತಾರೆ, ಆದರೆ ವಿಚಾರಣೆ ಪ್ರಕ್ರಿಯೆಯಲ್ಲಿ ಆಗುತ್ತಿರುವ ವಿಳಂಬವನ್ನು ಗಮನಿಸಿ, ನಿರ್ಬಂಧವನ್ನು ಸಡಿಲಿಸಬೇಕು ಮತ್ತು ಮತ್ತೆ ಜಾಮೀನು ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಅವರು ಸುಪ್ರೀಂ ಕೋರ್ಟ್ ಬಳಿ ಮನವಿ ಮಾಡಿದ್ದಾರೆ.
