ನ್ಯೂಸ್ 2 ಡೇ ಕನ್ನಡ ಡಿಜಿಟಲ್ ಡೆಸ್ಕ್:
ಸಂಸ್ಕೃತಿ, ಭಕ್ತಿ ಮತ್ತು ತಪಸ್ಸಿನ ನೆಲೆಯಾದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕಿನ ಕಲ್ಲಮುಂಡ್ಕೂರು ಗ್ರಾಮದ ಕಳಸಬೈಲಿನಲ್ಲಿ ಹುಟ್ಟಿದ ಯುವಕನೊಬ್ಬ, ಇಂದು ಇಡೀ ಕರಾವಳಿ ಸೇರಿದಂತೆ ದೇಶ-ವಿದೇಶಗಳಲ್ಲೂ ಧಾರ್ಮಿಕ ಜಾಗೃತಿ ಮೂಡಿಸುತ್ತಿದ್ದಾರೆ. ಕೇವಲ 30ರ ಹರೆಯದಲ್ಲೇ ಭಜನಾ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿ, ಸಾವಿರಾರು ಮನಸ್ಸುಗಳಿಗೆ ಭಕ್ತಿಯ ದಾರಿ ತೋರಿದ ಅಪರೂಪದ ಸಾಧಕ ಕಳಸಬೈಲು ಅಶೋಕ್ ನಾಯ್ಕ್.
ಕಷ್ಟಗಳ ನಡುವೆ ಅರಳಿದ ಭಕ್ತಿ ಸಾಧನೆ
ದೀವಂಗತ ಪೂವಪ್ಪ ನಾಯ್ಕ್ ಹಾಗೂ ಶ್ರೀಮತಿ ಪೂರ್ಣಿಮಾ ನಾಯ್ಕ್ ದಂಪತಿಯ ಪುತ್ರನಾಗಿ 1994ರಲ್ಲಿ ಜನಿಸಿದ ಅಶೋಕ್, ಬಾಲ್ಯದಿಂದಲೇ ಭಜನೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೀವ್ರ ಆಸಕ್ತಿ ಹೊಂದಿದ್ದರು. ಕುಟುಂಬದಲ್ಲಿದ್ದ ಬಡತನ, ಆರ್ಥಿಕ ಸಂಕಷ್ಟಗಳು ಹಾಗೂ 24ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ದುಃಖ ಇ ಯಾವುದೂ ಅವರ ಸಂಕಲ್ಪಕ್ಕೆ ಅಡ್ಡಿಯಾಗಲಿಲ್ಲ.
2012ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಭಜನಾ ಕಮ್ಮಟದಲ್ಲಿ ಅಧಿಕೃತ ಭಜನಾ ಗುರುವಾಗಿ ತರಬೇತಿ ಪಡೆದ ಬಳಿಕ, ಇವರ ಜೀವನದ ನೈಜ ಸೇವಾ ಪಯಣ ಆರಂಭವಾಯಿತು. ಮಳೆ-ಬಿಸಿಲನ್ನದೇ ಹಳ್ಳಿಯಿಂದ ಹಳ್ಳಿಗೆ ಅಲೆದು, ಉಚಿತವಾಗಿ ಕುಣಿತ ಭಜನಾ ತರಬೇತಿ ನೀಡಲು ಶುರು ಮಾಡಿದರು.
ಸಾಧನೆಯ ಹೆಗ್ಗುರುತುಗಳು:
- 56ಕ್ಕೂ ಹೆಚ್ಚು ಭಜನಾ ತಂಡಗಳು: ಕರಾವಳಿಯಷ್ಟೇ ಅಲ್ಲದೆ ಮಡಿಕೇರಿ, ಕಾರವಾರ, ಶಿವಮೊಗ್ಗ, ಬೆಂಗಳೂರು, ಮುಂಬೈ ಮತ್ತು ಗೋವಾಗಳಲ್ಲೂ ತಂಡಗಳನ್ನು ಕಟ್ಟಿ ಬೆಳೆಸಿದ್ದಾರೆ.
- 12,000ಕ್ಕೂ ಅಧಿಕ ಶಿಷ್ಯರು: ಮಕ್ಕಳಿಂದ ಹಿಡಿದು ವೃದ್ಧರವರೆಗೆ ಸಾವಿರಾರು ಜನರಿಗೆ ಕುಣಿತ ಭಜನೆಯ ಸಿದ್ಧಿ ನೀಡಿದ್ದಾರೆ.
- ಹೊಸ ನಾಯಕತ್ವದ ಸೃಷ್ಟಿ: ತಾವು ಕಲಿಸುವುದಷ್ಟೇ ಅಲ್ಲದೆ, ಪ್ರತಿಯೊಂದು ತಂಡದಲ್ಲೂ ಸಹ-ಗುರುಗಳನ್ನು ತರಬೇತುಗೊಳಿಸಿ, ಭಜನಾ ಪರಂಪರೆ ಮುಂದುವರಿಯುವಂತೆ ಮಾಡಿದ್ದಾರೆ.
- ವಿಶೇಷ ಚೇತನರಿಗೆ ಆಸರೆ: ದಿವ್ಯಾಂಗ ಮಕ್ಕಳಲ್ಲೂ ಆತ್ಮವಿಶ್ವಾಸ ತುಂಬಲು ಅವರಿಗೆ ಸಂಪೂರ್ಣ ಉಚಿತವಾಗಿ ಭಜನೆ, ತಾಳ ಮತ್ತು ಲಯ ತರಬೇತಿ ನೀಡುತ್ತಿರುವುದು ಇವರ ಸೇವೆಯ ಹೆಮ್ಮೆಯ ಭಾಗ.
ಯಾವುದೇ ಶುಲ್ಕವಿಲ್ಲ, ಧರ್ಮವೇ ಮೂಲಮಂತ್ರ
ಇಂದಿನ ವಾಣಿಜ್ಯೀಕರಣದ ಯುಗದಲ್ಲಿ ಅಶೋಕ್ ನಾಯ್ಕ್ ಅವರು ತಮ್ಮ ತರಬೇತಿಗೆ ಯಾವುದೇ ನಿಗದಿತ ಶುಲ್ಕ (ಫೀಸ್) ವಿಧಿಸುವುದಿಲ್ಲ. ಪೋಷಕರು ಅಥವಾ ಸಂಘಟಕರು ಪ್ರೀತಿಯಿಂದ ನೀಡುವ ಸಣ್ಣ ಕಾಣಿಕೆಯನ್ನಷ್ಟೇ ಸ್ವೀಕರಿಸಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಇವರು ಮೂಡಬಿದಿರೆ ಭಜನಾ ಪರಿಷತ್ತಿನ ಅಧ್ಯಕ್ಷರಾಗಿಯೂ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ಇವರ ಈ ಅನುಪಮ ಸೇವೆಗೆ ಬೆಂಗಳೂರಿನ 'ಕಲಾರಾಜೋತ್ಸವ ಪ್ರಶಸ್ತಿ', ಧರ್ಮಸ್ಥಳದ 'ಸಾಧಕ ಶ್ರೇಷ್ಠ ಪ್ರಶಸ್ತಿ' ಸೇರಿದಂತೆ 700ಕ್ಕೂ ಅಧಿಕ ಗೌರವಗಳು ಒಲಿದು ಬಂದಿವೆ.
ನಿರಂತರ ಸೇವೆಯ ನಡುವೆಯೂ ಬಗೆಹರಿಯದ ಮನೆ ಕನಸು
ಸಾವಿರಾರು ಜನರ ಬಾಳಿಗೆ ಭಕ್ತಿಯ ಬೆಳಕು ಚೆಲ್ಲಿದ ಈ ಸಾಧಕನ ವೈಯಕ್ತಿಕ ಬದುಕು ಮಾತ್ರ ಇನ್ನೂ ಆರ್ಥಿಕ ಕಷ್ಟದಲ್ಲೇ ಇದೆ. ಕಳಸಬೈಲಿನಲ್ಲಿರುವ ಇವರ ಹಳೆಯ ಮನೆ ಮಳೆಗಾಲದಲ್ಲಿ ಸೋರುತ್ತಿದ್ದು, ಶಿಥಿಲಾವಸ್ಥೆಯಲ್ಲಿದೆ. ಸಮಾಜಕ್ಕೆ ಇಷ್ಟೆಲ್ಲಾ ಕೊಡುಗೆ ನೀಡಿದ ಕಲಾ ಸಾಧಕನಿಗೆ ಒಂದು ಸುಸಜ್ಜಿತ ನೆರಳು (ಮನೆ) ನಿರ್ಮಾಣವಾಗಬೇಕಿದೆ. ಸಮಾಜದ ದಾನಿಗಳು, ಧಾರ್ಮಿಕ ಸಂಸ್ಥೆಗಳು ಹಾಗೂ ಜನಪ್ರತಿನಿಧಿಗಳು ಇವರ ನೆರವಿಗೆ ಧಾವಿಸಿದರೆ ಈ ಸಾಧಕನಿಗೆ ದೊಡ್ಡ ಆಸರೆಯಾಗಲಿದೆ.
"ನನ್ನೊಬ್ಬನ ಹೆಸರು ಬೆಳೆಯುವುದಕ್ಕಿಂತಲೂ, ಭಜನಾ ಸಂಸ್ಕೃತಿ ಮನೆಮನೆಗೆ ತಲುಪಬೇಕು. ಭಜಕರು ಮತ್ತು ಯುವ ಪ್ರತಿಭೆಗಳು ಬೆಳೆಯಬೇಕು ಎಂಬುದೇ ನನ್ನ ಆಶಯ."
— ಅಶೋಕ್ ನಾಯ್ಕ್ ಕಳಸಬೈಲು

