ಪಾಣೆ ಮಂಗಳೂರು :ಸ್ಥಳೀಯ ಶ್ರೀಮತಿ ಲಕ್ಷ್ಮೀ ದೇವಿ ನರಸಿಂಹ ಪೈ ವಿದ್ಯಾಲಯದಲ್ಲಿ ತುಳುನಾಡಿನ ವೈಭವದ ಸಾಂಸ್ಕೃತಿಕ ಪರಂಪರೆಯನ್ನು ಸಾರುವ 'ಆಟಿಡೊಂಜಿ ದಿನ' ಕಾರ್ಯಕ್ರಮವು ಆಗಸ್ಟ್ 8ರಂದು ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ರಾಜ್ಯೋತ್ಸವ ಪುರಸ್ಕೃತರಾದ ಶ್ರೀ ಲೋಕಯ್ಯ ಶೇರ ಅವರು, "ಆಟಿ ತಿಂಗಳು ಎಂದರೆ ಕೇವಲ ಪ್ರಕೃತಿಯಲ್ಲಿ ಆಗುವ ಬದಲಾವಣೆಯಲ್ಲ, ಅದು ನಮ್ಮ ಹಿರಿಯರ ಜೀವನಕ್ರಮ ಹಾಗೂ ಸಂಸ್ಕೃತಿಯ ಪ್ರತಿಫಲನ. ಆಟಿಡೊಂಜಿ ದಿನ ಎನ್ನುವುದು ಬರಿ ಸಾಂಪ್ರದಾಯಿಕ ಆಚರಣೆಗೆ ಸೀಮಿತವಾಗದೆ, ತುಳುವರ ಬದುಕಿನ ಮೂಲ ತಿರುಳಾಗಿದೆ," ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಸಂಚಾಲಕರಾದ ಶ್ರೀ ಸುಬೋದ್ ಜಿ. ಪ್ರಭು ಅವರು ಶುಭಹಾರೈಸಿದರು. ಶಾಲಾ ಕಾರ್ಯದರ್ಶಿ ಶ್ರೀ ನರೇಂದ್ರ ಕುಡ್ವ ಹಾಗೂ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶ್ವೇತಾ ಕಾಮತ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶೋಭೆ ತಂದರು.
ವಿದ್ಯಾರ್ಥಿಗಳ ಸಮಯೋಚಿತ ನಿರೂಪಣೆ:
ಶಾಲೆಯ ಚಿತ್ರಕಲಾ ಶಿಕ್ಷಕರಾದ ಶ್ರೀ ಯಶವಂತ್ ಸ್ನೇಹಗಿರಿ ಹಾಗೂ ಶ್ರೀಮತಿ ಸ್ಮಿತಾ ಹರೀಶ್ ಅವರ ಜವಾಬ್ದಾರಿಯುತ ಸಂಯೋಜನೆಯಲ್ಲಿ ಕಾರ್ಯಕ್ರಮ ಸುಸೂತ್ರವಾಗಿ ಜರುಗಿತು. ವಿದ್ಯಾರ್ಥಿ ಸಮರ್ಥ್ ಅಭ್ಯಾಗತರನ್ನು ಸ್ವಾಗತಿಸಿದರು. 10ನೇ ತರಗತಿಯ ವಿದ್ಯಾರ್ಥಿಗಳಾದ ವೀಕ್ಷ ಮತ್ತು ಶಮಿತ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರೆ, ವಿರಾಜ್ ವಂದನಾರ್ಪಣೆ ಮಾಡಿದರು.
ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದವರು ಸಕ್ರಿಯವಾಗಿ ಭಾಗವಹಿಸಿ ಆಟಿ ತಿಂಗಳ ಸಾಂಸ್ಕೃತಿಕ ಮಹತ್ವವನ್ನು ಕೊಂಡಾಡಿದರು.