ದಕ್ಷಿಣ ಕನ್ನಡ

Belthangady: ಹದಗೆಟ್ಟ ರಸ್ತೆ ಖಂಡಿಸಿ ಸಾರ್ವಜನಿಕರ ಆಕ್ರೋಶ; ರಸ್ತೆ ತಡೆದು ಪ್ರತಿಭಟನೆ, ಚುನಾವಣೆ ಬಹಿಷ್ಕಾರದ ಎಚ್ಚರಿಕೆ!

ಬೆಳ್ತಂಗಡಿ: ತಾಲೂಕಿನ ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದಿಂದ ಅಜಿಕುರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ದುರಸ್ತಿಗೀಡಾಗಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಡೆಗೆ ಬೇಸತ್ತ ಗ್ರಾಮಸ್ಥರು ಮತ್ತು ಆಟೋ ಚಾಲಕರು ರಸ್ತೆ ತಡೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

​ದಿನೇ ದಿನೇ ಹದಗೆಡುತ್ತಿರುವ ರಸ್ತೆಯಿಂದ ಸಾರ್ವಜನಿಕರ ಸಂಚಾರ ನರಕಸದೃಶವಾಗಿದ್ದು, ಆಡಳಿತ ವರ್ಗದ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ.
​ಕನಿಷ್ಠ ದುರಸ್ತಿಯೂ ಕಾಣದ ಸಂಪರ್ಕ ರಸ್ತೆ:
​ನೇತ್ರಾವತಿ ಸ್ನಾನಘಟ್ಟದಿಂದ ಅಜಿಕುರಿ ಮಾರ್ಗವಾಗಿ ದಿಡುಪೆ-ಪೈಚಾರು ರಾಜ್ಯ ಹೆದ್ದಾರಿಯನ್ನು ಜೋಡಿಸುವ ಈ ಪ್ರಮುಖ ರಸ್ತೆ ಕಳೆದ ಐದು ವರ್ಷಗಳಿಂದ ತೀವ್ರವಾಗಿ ಹಾಳಾಗಿದೆ. ರಸ್ತೆಯುದ್ದಕ್ಕೂ ಬೃಹತ್ ಗಾತ್ರದ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ಇದೆ. ಇಷ್ಟಾದರೂ ಸಂಬಂಧಪಟ್ಟ ಇಲಾಖೆ ಕನಿಷ್ಠ ಪ್ಯಾಚ್ ವರ್ಕ್ ಮಾಡುವ ಸೌಜನ್ಯವನ್ನೂ ತೋರಿಲ್ಲ ಎಂದು ಪ್ರತಿಭಟನಾಕಾರರು ದೂರಿದ್ದಾರೆ. "ರಸ್ತೆಯನ್ನು ತಕ್ಷಣವೇ ಪುನರ್ ನಿರ್ಮಾಣ ಮಾಡದಿದ್ದರೆ ಮುಂಬರುವ ಚುನಾವಣೆಗಳನ್ನು ಕಡ್ಡಾಯವಾಗಿ ಬಹಿಷ್ಕರಿಸಲಾಗುವುದು" ಎಂದು ಸ್ಥಳೀಯರು ಇದೇ ವೇಳೆ ಎಚ್ಚರಿಸಿದ್ದಾರೆ.
ಹುಸಿಯಾದ ಜನಪ್ರತಿನಿಧಿಗಳ ಭರವಸೆ:
"ಕಳೆದ ವರ್ಷವೂ ಇದೇ ರಸ್ತೆ ಸಮಸ್ಯೆಯನ್ನು ಮುಂದಿಟ್ಟುಕೊಂಡು ನಾವು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೆವು. ಆ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಜನಪ್ರತಿನಿಧಿಗಳು ಶೀಘ್ರದಲ್ಲೇ ಶಾಶ್ವತ ಪರಿಹಾರ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿ ಕೈತೊಳೆದುಕೊಂಡಿದ್ದರು. ಆದರೆ ವರ್ಷ ಕಳೆದರೂ ಪರಿಸ್ಥಿತಿ ಯಥಾಸ್ಥಿತಿಯಲ್ಲಿದೆ. ನಮ್ಮ ಹತ್ತಾರು ಮನವಿಗಳಿಗೆ ಯಾವುದೇ ಬೆಲೆ ಸಿಕ್ಕಿಲ್ಲ," ಎಂದು ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

​ಶಾಲಾ ಮಕ್ಕಳು, ಸಾರ್ವಜನಿಕರ ಹೈರಾಣು:
​ಈ ಮಾರ್ಗವಾಗಿ ಪ್ರತಿನಿತ್ಯ ನೂರಾರು ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ರೋಗಿಗಳು ಸಂಚರಿಸುತ್ತಾರೆ. ರಸ್ತೆಯ ಅವ್ಯವಸ್ಥೆಯಿಂದಾಗಿ ಪಾದಚಾರಿಗಳು ನಡೆದುಕೊಂಡು ಹೋಗಲು ಸಾಧ್ಯವಾಗದ ಸ್ಥಿತಿ ಇದೆ. ಇನ್ನು ಜೀವನಾಧಾರವಾಗಿರುವ ಆಟೋ ರಿಕ್ಷಾಗಳಂತೂ ಈ ರಸ್ತೆಯಲ್ಲಿ ಸಂಚರಿಸಲು ಹಿಂದೇಟು ಹಾಕುತ್ತಿದ್ದು, ಸಾರ್ವಜನಿಕರ ಸಾರಿಗೆ ಸಂಪರ್ಕವೇ ಕಡಿತಗೊಳ್ಳುವ ಭೀತಿ ಎದುರಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗಬೇಕಿದೆ.


image