ರಾಜ್ಯ

Tumakur: ಶಿರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರು ಸ್ಫೋಟ: ಯುವಕ ಸಜೀವ ದಹನ, ಜಿಗಿದು ಪ್ರಾಣ ಉಳಿಸಿಕೊಂಡ ಯುವತಿ!

 


ತುಮಕೂರು: ಜಿಲ್ಲೆಯ ಶಿರಾ ತಾಲೂಕಿನ ಜೋಗಿಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಚಲಿಸುತ್ತಿದ್ದ ಕಾರಿನಲ್ಲೇ ನಡೆದ ಭೀಕರ ಸ್ಫೋಟಕ್ಕೆ ನಾಗೇಂದ್ರ (30) ಎಂಬ ಯುವಕ ಸಜೀವ ದಹನವಾಗಿದ್ದರೆ, ಕಾರಿನಿಂದ ಕೆಳಕ್ಕೆ ಜಿಗಿದ ಯುವತಿಯೊಬ್ಬಳು ಗಂಭೀರ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಕಾರಿನೊಳಗೆ ನಡೆದಿತ್ತಾ ಜಗಳ?

ಮೂಲಗಳ ಪ್ರಕಾರ, ಇವರಿಬ್ಬರೂ ಬೆಂಗಳೂರಿನಿಂದ ಅಂಕೋಲಾ ಕಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಮಾರ್ಗಮಧ್ಯೆ ನಾಗೇಂದ್ರ ಹಾಗೂ ಯುವತಿಯ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಗಲಾಟೆ ವಿಕೋಪಕ್ಕೆ ತಿರುಗಿದಾಗ ನಾಗೇಂದ್ರ ಯುವತಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ, ಕಾರನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಚಲಿಸುವ ಕಾರಿನಿಂದ ಜಿಗಿದ ಯುವತಿ

ನಾಗೇಂದ್ರನ ವರ್ತನೆಯಿಂದ ತೀವ್ರ ಭಯಭೀತಗೊಂಡ ಯುವತಿ, ಜೀವ ಉಳಿಸಿಕೊಳ್ಳಲು ಚಲಿಸುತ್ತಿದ್ದ ಕಾರಿನಿಂದಲೇ ಹೊರಗೆ ಜಿಗಿದಿದ್ದಾಳೆ. ಅವಳು ಕೆಳಗೆ ಬಿದ್ದ ಕೆಲವೇ ಕ್ಷಣಗಳಲ್ಲಿ ಕಾರಿನಲ್ಲಿ ಸ್ಫೋಟ ಸಂಭವಿಸಿದ್ದು, ಇಡೀ ಕಾರು ಧಗಧಗನೆ ಹೊತ್ತಿ ಉರಿದಿದೆ. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ನಾಗೇಂದ್ರನಿಗೆ ಕಾರಿನಿಂದ ಹೊರಬರಲು ಸಾಧ್ಯವಾಗದೆ ಅಲ್ಲಿಯೇ ಕರಕಲಾಗಿದ್ದಾನೆ.

ಸ್ಥಳಕ್ಕೆ ಧಾವಿಸಿದ ರಕ್ಷಣಾ ಸಿಬ್ಬಂದಿ

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಕಳ್ಳಂಬೆಳ್ಳ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಇತ್ತ ತೀವ್ರವಾಗಿ ಗಾಯಗೊಂಡಿರುವ ಯುವತಿಯನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.

ಬಾಂಬ್ ಸ್ಫೋಟದ ಶಂಕೆ? ತನಿಖೆ ಚುರುಕು

ಸಾಮಾನ್ಯವಾಗಿ ಕಾರು ಅಪಘಾತಕ್ಕೀಡಾದಾಗ ಬೆಂಕಿ ಹೊತ್ತಿಕೊಳ್ಳುವುದು ಸಹಜ, ಆದರೆ ಚಲಿಸುತ್ತಿದ್ದ ಕಾರಿನಲ್ಲೇ ಇಷ್ಟೊಂದು ಭೀಕರವಾಗಿ ಸ್ಫೋಟ ಸಂಭವಿಸಿದ್ದು ಹೇಗೆ ಎಂಬುದು ಸದ್ಯದ ಯಕ್ಷಪ್ರಶ್ನೆಯಾಗಿದೆ. ಕಾರಿನಲ್ಲಿ ಮುಂಚಿತವಾಗಿಯೇ ಯಾವುದೇ ಸ್ಫೋಟಕ ವಸ್ತು ಅಥವಾ ಬಾಂಬ್ ಇಡಲಾಗಿತ್ತೇ? ಎಂಬ ಶಂಕೆ ವ್ಯಕ್ತವಾಗಿದ್ದು, ಕಳ್ಳಂಬೆಳ್ಳ ಪೊಲೀಸ್ ಅಧಿಕಾರಿಗಳು ಎಲ್ಲಾ ಆಯಾಮಗಳಲ್ಲೂ ತನಿಖೆಯನ್ನು ಚುರುಕುಗೊಳಿಸಿದ್ದಾರೆ.