ರಾಜ್ಯ

Bangalore: ನಂದಿ ಬೆಟ್ಟದ ಬಳಿ ಹೋಂ ಸ್ಟೇನಲ್ಲಿ ಯುವತಿ ನಿಗೂಢ ಸಾವು: ಕೇರಳ ಮೂಲದ ಯುವಕನಿಂದ ಆತ್ಮಹತ್ಯೆ ಯತ್ನ, ಲವ್ ಜಿಹಾದ್ ಆರೋಪ!


ಬೆಂಗಳೂರು :ನಂದಿ ಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯ ಮುದ್ದೇನಹಳ್ಳಿ ಬಳಿಯಿರುವ ಹೋಂ ಸ್ಟೇ ಒಂದರಲ್ಲಿ ಬೆಂಗಳೂರು ಮೂಲದ ಯುವತಿಯೊಬ್ಬಳು ಶವವಾಗಿ ಪತ್ತೆಯಾಗಿದ್ದು, ಇತ್ತ ಆಕೆಯ ಪ್ರಿಯಕರ ಎನ್ನಲಾದ ಯುವಕ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಪಾಲಾಗಿರುವ ಗಂಭೀರ ಘಟನೆ ಬೆಳಕಿಗೆ ಬಂದಿದೆ. ಮೃತ ಯುವತಿಯ ತಾಯಿ ಇದೊಂದು 'ಲವ್ ಜಿಹಾದ್' ಕೊಲೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರು ಮೂಲದ ಸಾಯಿ ಸುರಭಿ (30) ಮೃತಪಟ್ಟ ದುರ್ದೈವಿ. ಕೇರಳದ ಕೋಝಿಕ್ಕೋಡ್ ನಿವಾಸಿಯಾದ ಕ್ಯಾಬ್ ಚಾಲಕ ಸಂಜೀತ್ ಅಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಯುವಕ.

ಘಟನೆಯ ಹಿನ್ನೆಲೆ:                                                 ಪೊಲೀಸ್ ಮೂಲಗಳ ಪ್ರಕಾರ, ಸಾಯಿ ಸುರಭಿ ಹಾಗೂ ಸಂಜೀತ್ ಅಲಿ ಕಳೆದ ಶನಿವಾರ ಮುದ್ದೇನಹಳ್ಳಿ ಬಳಿಯ ಹೋಂ ಸ್ಟೇಗೆ ಬಂದು ರೂಮ್ ಬುಕ್ ಮಾಡಿದ್ದರು. ಆದರೆ, ಹೋಂ ಸ್ಟೇ ಕೇರ್‌ಟೇಕರ್ ನೀಡಿರುವ ಹೇಳಿಕೆ ಪ್ರಕಾರ, ಆರಂಭದಲ್ಲಿ ಯುವಕ ಒಬ್ಬನೇ ಬಂದಿದ್ದ ಎನ್ನಲಾಗಿದ್ದು, ಯುವತಿ ಯಾವಾಗ ಬಂದಳು ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ ಎನ್ನಲಾಗಿದೆ.

ಸೋಮವಾರ ಮಧ್ಯಾಹ್ನ ಚೆಕ್‌ಔಟ್ ಸಮಯ ಕಳೆದರೂ ರೂಮ್ ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡ ಕೇರ್‌ಟೇಕರ್ ಪರಿಶೀಲಿಸಿದ್ದಾರೆ. ಈ ವೇಳೆ ಸಾಯಿ ಸುರಭಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಆಕೆ ನೇಣು ಹಾಕಿಕೊಂಡಿದ್ದ ಹಗ್ಗ ಕತ್ತರಿಸಿದ ಸ್ಥಿತಿಯಲ್ಲಿದ್ದು, ಪಕ್ಕದಲ್ಲೇ ಸಂಜೀತ್ ಅಲಿ ಪ್ರಜ್ಞೆ ತಪ್ಪಿ ಬಿದ್ದಿದ್ದನು. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವಕ ಅತಿಯಾದ ನಿದ್ರೆ ಮಾತ್ರೆ ಅಥವಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದು ಶಂಕಿಸಲಾಗಿದೆ.

'ಲವ್ ಜಿಹಾದ್' ಹೆಸರಲ್ಲಿ ಕೊಲೆ ಮಾಡಿದ್ದಾರೆ: ಮೃತಳ ತಾಯಿ ಆಕ್ರೋಶ

ಮಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಘಾತಕ್ಕೊಳಗಾದ ಸಾಯಿ ಸುರಭಿ ತಾಯಿ ಗೀತಾ ಅವರು, ಇದೊಂದು ವ್ಯವಸ್ಥಿತ 'ಲವ್ ಜಿಹಾದ್' ಕೊಲೆ ಎಂದು ಆರೋಪಿಸಿದ್ದಾರೆ. ಸಂಜೀತ್ ಅಲಿ ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನಲ್ಲಿ ಓದುತ್ತಿದ್ದಾಗ ಮಗಳಿಗೆ ಪರಿಚಯವಾಗಿದ್ದ. ಅಂದಿನಿಂದಲೇ ಪ್ರೀತಿಯ ಹೆಸರಿನಲ್ಲಿ ಆಕೆಗೆ ತೀವ್ರ ಕಿರುಕುಳ ನೀಡುತ್ತಿದ್ದ ಎಂದು ಕಣ್ಣೀರು ಹಾಕಿದ್ದಾರೆ.

"ಅವನ ಕಾಟ ತಾಳಲಾರದೆ ಮಗಳನ್ನು ಬೇರೆ ಕಾಲೇಜಿಗೆ ಸೇರಿಸಿದರೂ ಅಲ್ಲಿಗೂ ಬಂದು ಪೀಡಿಸುತ್ತಿದ್ದ. ನನ್ನ ಮಗಳನ್ನು ಮರಳು ಮಾಡಿ, ಆಕೆಗೆ ಡ್ರಗ್ಸ್ ಹಾಗೂ ಮದ್ಯದ ದಾಸಿಯಾಗುವಂತೆ ಮಾಡಿದ್ದ. ನಂತರ ಆಕೆಯನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿಸಿ ಚಿಕಿತ್ಸೆ ಕೊಡಿಸಿ ಗುಣಮುಖ ಮಾಡಿದ್ದೆವು. ಆದರೆ ಮತ್ತೆ ಆಕೆಯ ಬೆನ್ನು ಬಿದ್ದಿದ್ದ," ಎಂದು ತಾಯಿ ಗೀತಾ ದೂರಿದ್ದಾರೆ.

ಕೆಲಸಕ್ಕೆ ಸೇರಿದ 10 ದಿನದಲ್ಲೇ ದುರಂತ!          ಚಿಕ್ಕಬಳ್ಳಾಪುರದ ಶ್ರೀ ಸತ್ಯ ಸಾಯಿ ಆಸ್ಪತ್ರೆಯಲ್ಲಿ ಸಾಯಿ ಸುರಭಿ ಕೇವಲ 10 ದಿನಗಳ ಹಿಂದಷ್ಟೇ ಫಿಸಿಯೋಥೆರಪಿಸ್ಟ್ ಆಗಿ ಕೆಲಸಕ್ಕೆ ಸೇರಿದ್ದಳು. ಶನಿವಾರ ಆಸ್ಪತ್ರೆಯಲ್ಲಿ ಸತ್ಸಂಗ ಕಾರ್ಯಕ್ರಮ ಇರುವುದರಿಂದ ಅಲ್ಲಿಗೆ ಹೋಗುತ್ತಿರುವುದಾಗಿ ಮನೆಯಲ್ಲಿ ಹೇಳಿ ಬಂದಿದ್ದಳು. ಆದರೆ ಆಕೆ ಸಂಜೀತ್ ಅಲಿಯನ್ನು ಭೇಟಿಯಾಗಲು ಹೋಗುತ್ತಿರುವ ವಿಷಯ ಕುಟುಂಬದವರಿಗೆ ತಿಳಿದಿರಲಿಲ್ಲ. ಸದ್ಯ ಆಕೆ ತಂಗಿದ್ದ ಕೊಠಡಿಯಲ್ಲಿ ಪೊಲೀಸರಿಗೆ ಒಂದು ಡೈರಿ ಲಭ್ಯವಾಗಿದ್ದು, ಅದರಲ್ಲಿರುವ ಮಾಹಿತಿಯ ಆಧಾರದ ಮೇಲೂ ತನಿಖೆ ಚುರುಕುಗೊಳಿಸಲಾಗಿದೆ.

ಎಸ್‌ಪಿ ಹೇಳಿಕೆ:                                                        ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಚಿಕ್ಕಬಳ್ಳಾಪುರ ಎಸ್‌ಪಿ ಕುಶಾಲ್ ಚೌಕ್ಷೆ ಅವರು, "ಸದ್ಯಕ್ಕೆ ಆರೋಪಿ ಎನ್ನಲಾದ ಸಂಜೀತ್ ಅಲಿ ತೀವ್ರ ಅಸ್ವಸ್ಥನಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನಿಗೆ ಪ್ರಜ್ಞೆ ಬಂದ ಬಳಿಕ ವಿಚಾರಣೆ ನಡೆಸಿದ ನಂತರವಷ್ಟೇ ಯುವತಿಯ ಸಾವಿಗೆ ನಿಖರ ಕಾರಣ ಏನೆಂಬುದು ಸ್ಪಷ್ಟವಾಗಲಿದೆ," ಎಂದು ತಿಳಿಸಿದ್ದಾರೆ. ಮುದ್ದೇನಹಳ್ಳಿ ಮತ್ತು ನಂದಿ ಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



image