ಬೆಳ್ತಂಗಡಿ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಆಸಕ್ತಿ ಮೂಡಿಸುವ ಹಾಗೂ ಅವರ ಸಾಧನೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಉಜಿರೆಯ ಶ್ರಮಿಕ ಸೇವಾ ಟ್ರಸ್ಟ್ ವತಿಯಿಂದ ಜೂ. 28 ರಂದು ಅತ್ಯುನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶಾಸಕ ಹರೀಶ್ ಪೂಂಜಾ ಅವರ ನೇತೃತ್ವದಲ್ಲಿ ನಡೆದ ಈ ಸಮಾರಂಭದಲ್ಲಿ, 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ಬೆಳ್ತಂಗಡಿ ತಾಲೂಕಿನ ವಿದ್ಯಾರ್ಥಿಗಳಿಗೆ "ಶ್ರಮಿಕ ಪ್ರತಿಭಾ ವಿದ್ಯಾರ್ಥಿ" ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉಜಿರೆಯ ಅನುಗ್ರಹ ಚರ್ಚ್ ಸಭಾಭವನದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಗಣ್ಯರು ಜಂಟಿಯಾಗಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
'ಪ್ರತಿಭೆಗೆ ಪ್ರೋತ್ಸಾಹ, ಶಿಕ್ಷಣಕ್ಕೆ ಉತ್ತೇಜನ'
"ಪ್ರತಿಭೆಗೆ ಪ್ರೋತ್ಸಾಹ, ಶಿಕ್ಷಣಕ್ಕೆ ಉತ್ತೇಜನ" ಎಂಬ ಅರ್ಥಪೂರ್ಣ ಘೋಷವಾಕ್ಯದೊಂದಿಗೆ ಆಯೋಜಿಸಲಾಗಿದ್ದ ಈ ಸಮಾರಂಭದಲ್ಲಿ ಉಜಿರೆ, ಲಾಯಿಲ ಹಾಗೂ ಧರ್ಮಸ್ಥಳ ಮಹಾಶಕ್ತಿ ಕೇಂದ್ರಗಳ ವ್ಯಾಪ್ತಿಯ ಒಟ್ಟು 26 ಗ್ರಾಮಗಳ ಪ್ರತಿಭೆಗಳನ್ನು ಗುರುತಿಸಿ ಪುರಸ್ಕರಿಸಲಾಯಿತು.
ಲಾಯಿಲ, ನಡ, ಕನ್ಯಾಡಿ, ನಾವೂರು, ಇಂದಬೆಟ್ಟು, ಮಿತ್ತಬಾಗಿಲು, ಮಲವಂತಿಗೆ, ಕಡಿರುದ್ಯಾವರ, ಮುಂಡಾಜೆ, ಚಾರ್ಮಾಡಿ, ಚಿಬಿದ್ರೆ, ತೋಟತ್ತಾಡಿ, ನೆರಿಯ, ಪುದುವೆಟ್ಟು, ಕಲ್ಮಂಜ, ಉಜಿರೆ, ಬೆಳಾಲು, ಧರ್ಮಸ್ಥಳ, ಪಟ್ರಮೆ, ಕೊಕ್ಕಡ, ಕಳೆಂಜ, ನಿಡ್ಲೆ, ಶಿಬಾಜೆ, ಶಿಶಿಲ, ರೆಖ್ಯಾ ಹಾಗೂ ಹತ್ಯಡ್ಕ ಗ್ರಾಮಗಳ ನೂರಾರು ಡಿಸ್ಟಿಂಕ್ಷನ್ ವಿಜೇತ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಅಪಾರ ಸಂಖ್ಯೆಯ ಉಪಸ್ಥಿತಿಯಿಂದಾಗಿ ಸಭಾಭವನ ಸಂಪೂರ್ಣ ಭರ್ತಿಯಾಗಿತ್ತು.
ಗ್ರಾಮೀಣ ಶಿಕ್ಷಣಕ್ಕೆ ಶ್ರಮಿಕ ಟ್ರಸ್ಟ್ ಬಲ: ಶಾಸಕ ಹರೀಶ್ ಪೂಂಜಾ
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಹರೀಶ್ ಪೂಂಜಾ ಅವರು, "ಗ್ರಾಮೀಣ ಭಾಗದ ಮಕ್ಕಳಲ್ಲಿ ಶಿಕ್ಷಣದ ಬಗ್ಗೆ ಹೆಚ್ಚಿನ ಆಸಕ್ತಿ ಮತ್ತು ಪ್ರೇರಣೆ ತುಂಬುವ ಕೆಲಸವನ್ನು ಶ್ರಮಿಕ ಸೇವಾ ಟ್ರಸ್ಟ್ ನಿರಂತರವಾಗಿ ಮಾಡುತ್ತಾ ಬಂದಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದ ತಾಲೂಕಿನ ವಿದ್ಯಾರ್ಥಿಗಳನ್ನು ಉತ್ತೇಜಿಸುವ ಸಲುವಾಗಿ ಒಟ್ಟು ಮೂರು ಪ್ರಮುಖ ಕೇಂದ್ರಗಳಲ್ಲಿ ಈ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ" ಎಂದು ತಿಳಿಸಿದರು.
ವೇದಿಕೆಯಲ್ಲಿ ಗಣ್ಯರ ಉಪಸ್ಥಿತಿ:
ಸಮಾರಂಭದಲ್ಲಿ ಮಡಂತ್ಯಾರಿನ ನಿವೃತ್ತ ಪ್ರಾಂಶುಪಾಲರಾದ ಜೋಸೆಫ್ ಏನ್. ಎಂ, ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ. ಪಾರೆಂಕಿ, ರವಿಕುಮಾರ್ ಬರಮೇಲು, ಬೆಳಾಲು ಸಿಎ ಬ್ಯಾಂಕ್ ಅಧ್ಯಕ್ಷ ಪದ್ಮಗೌಡ ಬೆಳಾಲು, ಮೋಹನ್ ಲಕ್ಷ್ಮಿ ಗ್ರೂಪ್ ಪ್ರಮುಖರು ಉಪಸ್ಥಿತರಿದ್ದರು.
ಇವರೊಂದಿಗೆ ಸ್ಥಳೀಯ ಮುಖಂಡರುಗಳಾದ ಗಣೇಶ್ ಗೌಡ ನಾವೂರು, ಅರವಿಂದ್ ಲಾಯಿಲ, ಶಶಿಧರ್ ಕಲ್ಮಂಜ, ಉಷಾ ಕಾರಂತ್ ಉಜಿರೆ, ವಿದ್ಯಾ ಶ್ರೀನಿವಾಸ್ ಗೌಡ ಬೆಳಾಲು, ಪ್ರೀತಮ್ ಡಿ. ಧರ್ಮಸ್ಥಳ ಸೇರಿದಂತೆ ಟ್ರಸ್ಟ್‌ನ ಪದಾಧಿಕಾರಿಗಳು ಹಾಗೂ ಮಹಿಳಾ ಪ್ರತಿನಿಧಿಗಳು ಉಪಸ್ಥಿತರಿದ್ದು ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಸಮೀಕ್ಷಾ ಶಿರ್ಲಾಲು ಕಾರ್ಯಕ್ರಮವನ್ನು ನಿರೂಪಿಸಿದರು.
ವರದಿ - ರಶ್ಮಿತಾ ಶೆಟ್ಟಿ



