ಉಪ್ಪಳ, ಜೂ. 26: ಬಾಯಿಯಲ್ಲಿ ಕ್ಯಾನ್ಸರ್ ಬಾಧಿಸಿ ಕೋಝಿಕೋಡು ಆಸ್ಪತ್ರೆಯಲ್ಲಿ ನಿಧನರಾದ ಮೀಂಜ ಪಂಚಾಯತ್ ವ್ಯಾಪ್ತಿಯ ಚಿಗುರುಪಾದೆ ನಿವಾಸಿ ನಾರಾಯಣ ಅವರ ಮೃತದೇಹವನ್ನು ಕೊಂಡೊಯ್ಯಲು ಯಾರೂ ಮುಂದೆ ಬಾರದ ಹಿನ್ನೆಲೆಯಲ್ಲಿ ಮುಸ್ಲಿಂ ಹೆಣ್ಣುಮಗಳೋರ್ವರು ಮಗಳ ಸ್ಥಾನದಲ್ಲಿ ನಿಂತು ಅಂತಿಮ ಸಂಸ್ಕಾರ ನೆರವೇರಿಸಿದ ಘಟನೆ ನಡೆದಿದೆ.
ನಾರಾಯಣ ಅವರು ಅನ್ನ ಆಹಾರವಿಲ್ಲದೆ ತೀರಾ ಬಳಲಿ ಖಾಲಿ ಶೆಡ್ ಒಂದರಲ್ಲಿ ಬಿದ್ದುಕೊಂಡಿರುವ ವಿಷಯವನ್ನು ಸ್ಥಳೀಯ ಶರೀಫ್ ಚಿನಾಲ ಎನ್ನುವವರು ವೃದ್ಧಾಶ್ರಮ ನಡೆಸುತ್ತಿರುವ ಜಿಲ್ಲಾ ಪಂಚಾಯತ್ ಸದಸ್ಯೆ ಇರ್ಫಾನಾ ಅವರಿಗೆ ತಿಳಿಸುತ್ತಾರೆ.
ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ನಾರಾಯಣ ಅವರ ಪರಿಸ್ಥಿತಿ ಗಂಭೀರವಿದ್ದು, ಕುಡಿಸಿದ ನೀರು ಕೂಡ ಗಂಟಲಿನಲ್ಲಿ ಇಳಿಯುತ್ತಿರಲಿಲ್ಲ. ಇರ್ಫಾನ ಅವರು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಅವರ ಅನುಮತಿ ಪಡೆದು ನಿರ್ಗತಿಕ ಸ್ಥಿತಿಯಲ್ಲಿ ಇದ್ದ ವ್ಯಕ್ತಿಯನ್ನು ಕೋಝಿಕೋಡು ವೈದ್ಯಕೀಯ ಕಾಲೇಜಿಗೆ ಸೇರಿಸುವ ವ್ಯವಸ್ಥೆ ಮಾಡುತ್ತಾರೆ.
ರೋಗಿಯನ್ನು ಸ್ಥಳೀಯ ಶೇಕ್ ಸಯ್ಯಿದ್ ಪ್ರತಿಷ್ಠಾನದ ಕಾರ್ಯಕರ್ತರು ಸ್ನಾನ ಮಾಡಿಸಿ ಪ್ರಾಥಮಿಕ ಶುಶ್ರೂಷೆ ನಡೆಸುತ್ತಾರೆ.
ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ನಾರಾಯಣ ಅವರಿಗೆ ಬಾಯಿಯಲ್ಲಿ ಕ್ಯಾನ್ಸರ್ ಆಗಿದ್ದು, ಕೊನೆಯ ಹಂತದಲ್ಲಿ ತಿಳಿದುಬರುತ್ತದೆ. ಒಂದು ತಿಂಗಳ ಚಿಕಿತ್ಸೆ ಬಳಿಕ ನಾರಾಯಣ ಅವರು ಗುರುವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೃತದೇಹವನ್ನು ಕೊಂಡೊಯ್ಯಲು ವಾರಿಸುದಾರರು ಯಾರೂ ಮುಂದಾಗಿಲ್ಲ. ಈ ಸಂದರ್ಭದಲ್ಲಿ ಮೃತರ ಸಹೋದರಿಯಿಂದ ಮಂಜೇಶ್ವರ ಪೊಲೀಸ್ ಠಾಣೆ ಮೂಲಕ ಒಪ್ಪಿಗೆ ಪತ್ರ ಪಡೆದು, ಕೋಝಿಕೋಡು ವೈದ್ಯಕೀಯ ಕಾಲೇಜು ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಯವರಿಗೆ ಇರ್ಫಾನ ಅವರು ಸಲ್ಲಿಸಿದ್ದಾರೆ
ಬಳಿಕ ಮೃತದೇಹವನ್ನು ಉಪ್ಪಳಕ್ಕೆ ತಂದು ಚೆರುಗೋಳಿಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಮಗಳ ಸ್ಥಾನದಲ್ಲಿ ನಿಂತು ಹಿಂದು ಸಂಪ್ರದಾದಂತೆ ಇರ್ಫಾನ ಅವರು ಚಿತೆಗೆ ಅಗ್ನಿ ಸ್ಪರ್ಶ ನೆರವೇರಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತರಾದ ರಿಯಾಸ್ ಪಿಲಾತ್ತರ, ಮೊಹಮ್ಮದ್ ಕೈಕಂಬ ಮೊದಲಾದವರು ಸಹಕರಿಸಿದರು.
ನಾರಾಯಣ ಅವರಿಗೆ ಮದುವೆಯಾಗಿದ್ದು, ಪತ್ನಿ ಮತ್ತು ಕುಟುಂಬ ಜೊತೆಗಿಲ್ಲ ಎಂದು ತಿಳಿದುಬಂದಿದೆ.
ಶೇಖ್ ಸಯ್ಯಿದ್ ವೃದ್ಧಾಶ್ರಮ ನಡೆಸುತ್ತಿರುವ ಇರ್ಫಾನ ಅವರು ಈ ಹಿಂದೆಯೂ ಅನಾಥ ಹಿಂದು ಕುಟುಂಬ ಸದಸ್ಯರ ಶವದ ಅಂತಿಮ ಸಂಸ್ಕಾರವನ್ನು ಹಿಂದು ರುದ್ರಭೂಮಿಯಲ್ಲಿ ನೆರವೇರಿಸಿರುವ ಕಾರಣ ಎಲ್ಲವೂ ಸುಗಮವಾಗಿ ನಡೆದಿದೆ.


