ದಕ್ಷಿಣ ಕನ್ನಡ

ಮೂಡುಬಿದ್ರೆ : ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ತಾತ್ಕಾಲಿಕ ತಂಗುದಾಣ: ಮೂಡುಬಿದಿರೆಯಲ್ಲಿ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

 


ಮೂಡುಬಿದಿರೆ: ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ತಾತ್ಕಾಲಿಕ ತಂಗುದಾಣ ಕಲ್ಪಿಸುವ ನಿಟ್ಟಿನಲ್ಲಿ ಪುರಸಭೆ, ಕೆಎಸ್‌ಆರ್‌ಟಿಸಿ ವಿಭಾಗದ ಅಧಿಕಾರಿಗಳು, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ವೃತ್ತದ ಬಳಿ ಸೋಮವಾರ ಸ್ಥಳ ಪರಿಶೀಲನೆ ನಡೆಸಿದರು.

ಕೆಎಸ್‌ಆರ್‌ಟಿಸಿಯ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಮಾತನಾಡಿ, ಮೂಡುಬಿದಿರೆಯಲ್ಲಿ ಜನಸಂದಣಿ ಹಾಗೂ ವಾಹನ ದಟ್ಟಣೆ ಹೆಚ್ಚಿದ್ದು, 1968ರಿಂದಲೂ ಖಾಸಗಿ ಬಸ್‌ಗಳೇ ಸಂಚಾರ ನಡೆಸುತ್ತಿವೆ. ಪ್ರಸ್ತುತ ನಾಲ್ಕು ಕೆಎಸ್‌ಆರ್‌ಟಿಸಿ ಬಸ್‌ಗಳು ಮಂಗಳೂರು-ಮೂಡುಬಿದಿರೆ-ಕಾರ್ಕಳ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಶೀಘ್ರದಲ್ಲೇ ಇನ್ನೂ ನಾಲ್ಕು ಬಸ್‌ಗಳು ಸೇರ್ಪಡೆಯಾಗಲಿವೆ. ಇದರಿಂದ ಉಂಟಾಗುವ ತೊಂದರೆ ತಪ್ಪಿಸಲು ಪುರಸಭೆಯ ಮನವಿಯಂತೆ ತಾತ್ಕಾಲಿಕ ನಿಲುಗಡೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.



ಪುರಸಭೆಯ ಮುಖ್ಯಾಧಿಕಾರಿ ಇಂದು ಎಂ. ಮಾತನಾಡಿ, ಶಾಶ್ವತ ಕೆಎಸ್‌ಆರ್‌ಟಿಸಿ ಬಸ್ ತಂಗುದಾಣ ನಿರ್ಮಾಣವಾಗುವವರೆಗೆ ಖಾಸಗಿ ವಾಹನಗಳ ಪಾರ್ಕಿಂಗ್‌ಗೆ ಮೀಸಲಾದ ಅರ್ಧ ಜಾಗದಲ್ಲಿ ತಾತ್ಕಾಲಿಕವಾಗಿ ಬಸ್‌ಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

ಸ್ಥಳ ಪರಿಶೀಲನೆ ವೇಳೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಭಾರತೀಯ ರೈತ ಸೇನೆಯ ಜಿಲ್ಲಾ ಅಧ್ಯಕ್ಷ ಹರಿಪ್ರಸಾದ್ ನಾಯಕ್, ಕಾರ್ಯದರ್ಶಿ ಶಿವರಾಮ್ ಜೆ. ಶೆಟ್ಟಿ, ಕೆಎಸ್‌ಆರ್‌ಟಿಸಿಯ ಸಹಾಯಕ ಎಂಜಿನಿಯರ್ ಹರೀಶ್, ಶಿವಾನಂದ ಪಾಂಡ್ರು ಉಪಸ್ಥಿತರಿದ್ದರು.



image