ದಕ್ಷಿಣ ಕನ್ನಡ

Surathkal: ಬೈಕಂಪಾಡಿ ಬಳಿ ಭೀಕರ ದರೋಡೆ: ಮುಂಬೈನಿಂದ ಬರುತ್ತಿದ್ದ ಚಿನ್ನದ ವ್ಯಾಪಾರಿಯನ್ನು ಅಡ್ಡಗಟ್ಟಿ ಕಾರು, ನಗದು, ಚಿನ್ನ ಲೂಟಿ!

 
ಸುರತ್ಕಲ್: ಮುಂಬೈನಿಂದ ಕುಟುಂಬ ಸಮೇತ ಕೇರಳಕ್ಕೆ ಕಾರಿನಲ್ಲಿ ತೆರಳುತ್ತಿದ್ದ ಚಿನ್ನದ ವ್ಯಾಪಾರಿಯೊಬ್ಬರನ್ನು ಸಿನಿಮೀಯ ಶೈಲಿಯಲ್ಲಿ ಅಡ್ಡಗಟ್ಟಿ, ಹಲ್ಲೆ ನಡೆಸಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿರುವ ಆಘಾತಕಾರಿ ಘಟನೆ ಸೋಮವಾರ ಮುಂಜಾನೆ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೈಕಂಪಾಡಿಯಲ್ಲಿ ನಡೆದಿದೆ.

ಮಹಾರಾಷ್ಟ್ರದ ಸಾಂಗ್ಲಿ ಮೂಲದ, ಪ್ರಸ್ತುತ ಕೇರಳದ ಪಯ್ಯನ್ನೂರಿನಲ್ಲಿ ಚಿನ್ನದ ವ್ಯಾಪಾರ ಮಾಡುತ್ತಿರುವ ವಿಕಾಸ್ (46) ದರೋಡೆಗೊಳಗಾದ ದುರ್ದೈವಿ. ಇವರು ಸಾಂಗ್ಲಿಯಲ್ಲಿ ವಿವಾಹ ಸಮಾರಂಭವೊಂದರಲ್ಲಿ ಪಾಲ್ಗೊಂಡು, ಪತ್ನಿ ಹಾಗೂ 14 ವರ್ಷದ ಮಗನೊಂದಿಗೆ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಕೇರಳಕ್ಕೆ ಹಿಂತಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ತ್ರಿವಳಿ ಕಾರುಗಳಲ್ಲಿ ಬಂದು ಸಿನಿಮೀಯ ಶೈಲಿಯಲ್ಲಿ ಬ್ಲಾಕ್ ಮಾಡಿದ ದರೋಡೆಕೋರರು!

ಸೋಮವಾರ ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ವಿಕಾಸ್ ಅವರ ಕಾರು ಬೈಕಂಪಾಡಿಯ ಚಿತ್ರಪುರ ಬಳಿ ತಲುಪುತ್ತಿದ್ದಂತೆ, ಇವರನ್ನು ಹಿಂಬಾಲಿಸಿಕೊಂಡು ಬಂದ ದರೋಡೆಕೋರರ ಗ್ಯಾಂಗ್‌ ಒಟ್ಟು ಮೂರು ಕಾರುಗಳಲ್ಲಿ (ಎರಡು ಇನ್ನೋವಾ ಮತ್ತು ಒಂದು ಸ್ವಿಫ್ಟ್) ದಿಢೀರ್ ದಾಳಿ ನಡೆಸಿದೆ. ವಿಕಾಸ್ ಅವರ ಕಾರನ್ನು ಓವರ್‌ಟೇಕ್ ಮಾಡಿದ ದರೋಡೆಕೋರರು, ಒಂದು ಇನ್ನೋವಾ ಕಾರನ್ನು ಮುಂಭಾಗದಲ್ಲಿ, ಮತ್ತೊಂದನ್ನು ಹಿಂಬದಿಯಲ್ಲಿ ಹಾಗೂ ಇನ್ನೊಂದು ಕಾರನ್ನು ಎಡಭಾಗದಲ್ಲಿ ಅಡ್ಡವಾಗಿ ನಿಲ್ಲಿಸಿ ಸಂಪೂರ್ಣವಾಗಿ 'ಬ್ಲಾಕ್' ಮಾಡಿದ್ದಾರೆ.

ಬಳಿಕ ಕಾರಿನ ಗಾಜನ್ನು ಪುಡಿಪುಡಿ ಮಾಡಿದ 7 ರಿಂದ 8 ಮಂದಿ ದುಷ್ಕರ್ಮಿಗಳ ತಂಡ, ಡೋರ್ ಲಾಕ್ ತೆರೆದು ವಿಕಾಸ್ ಅವರನ್ನು ಹೊರಗೆ ಎಳೆದು ಹಾಕಿ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಅಷ್ಟಕ್ಕೇ ನಿಲ್ಲದ ದರೋಡೆಕೋರರು, ವಿಕಾಸ್ ಅವರ ಪತ್ನಿ ಮತ್ತು ಮಗ ಕಾರಿನ ಒಳಗಿರುವಾಗಲೇ ಕಾರಿನೊಂದಿಗೆ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಅಡ್ಡಬಂದ ವಿಕಾಸ್ ಅವರ ಮೇಲೆಯೇ ಕಾರು ಹರಿಸಲು ಕ್ರೂರ ಯತ್ನ ನಡೆಸಿದ್ದಾರೆ ಎನ್ನಲಾಗಿದೆ.

ಹೆಂಡತಿ, ಮಗ ಸೇಫ್; 20 ಲಕ್ಷ ಮೌಲ್ಯದ ಸೊತ್ತು ಕಳವು      

ಕಾರನ್ನು ಅಪಹರಿಸಿದ ದುಷ್ಕರ್ಮಿಗಳು, ಸ್ವಲ್ಪ ದೂರದ ಕೂಳೂರು ಬಳಿ ತಲುಪುತ್ತಿದ್ದಂತೆ ಕಾರಿನಲ್ಲಿದ್ದ ವಿಕಾಸ್ ಅವರ ಪತ್ನಿ ಮತ್ತು ಮಗನನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿ, ಕಾರಿನೊಂದಿಗೆ ಪರಾರಿಯಾಗಿದ್ದಾರೆ. ಅದೃಷ್ಟವಶಾತ್ ಪತ್ನಿ ಹಾಗೂ ಮಗನಿಗೆ ಯಾವುದೇ ದೈಹಿಕ ಹಾನಿ ಮಾಡಿಲ್ಲ, ಅಲ್ಲದೆ ಪತ್ನಿ ಧರಿಸಿದ್ದ ಚಿನ್ನಾಭರಣಗಳನ್ನೂ ಮುಟ್ಟಿಲ್ಲ ಎಂದು ತಿಳಿದುಬಂದಿದೆ. ದರೋಡೆಕೋರರು ಕಾರಿನಲ್ಲಿದ್ದ 180 ಗ್ರಾಂ ಚಿನ್ನ ಹಾಗೂ ನಗದು ಸೇರಿದಂತೆ ಒಟ್ಟು ಸುಮಾರು 20 ಲಕ್ಷ ರೂಪಾಯಿ ಮೌಲ್ಯದ ಸೊತ್ತನ್ನು ಲೂಟಿ ಮಾಡಿದ್ದಾರೆ ಎನ್ನಲಾಗಿದೆ.

ತನಿಖೆಗೆ ಕಮಿಷನರ್ ಸ್ಪೆಷಲ್ ಟೀಮ್ ಮುಂದು                 ಈ ಭೀಕರ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದರೋಡೆಕೋರರು ಕೃತ್ಯಕ್ಕೆ ಬಳಸಿರುವ ಕಾರುಗಳ ನಂಬರ್ ಪ್ಲೇಟ್‌ಗಳು ನಕಲಿಯಾಗಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಪೊಲೀಸ್ ಉನ್ನತ ಅಧಿಕಾರಿಗಳ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದೆ. ಆರೋಪಿಗಳ ಪತ್ತೆಗಾಗಿ ಮಂಗಳೂರು ಪೊಲೀಸ್ ಆಯುಕ್ತರು ತಕ್ಷಣವೇ ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಹೆದ್ದಾರಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡುತ್ತಿರುವ ಪೊಲೀಸರು ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.



image