ಪುತ್ತೂರು: ಉಪ್ಪಿನಂಗಡಿ ಸಮೀಪದ ಸೇಡಿಯಾಪು ಕಾಪು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ವಾಹನವೊಂದು ಪಲ್ಟಿಯಾದ ಪರಿಣಾಮ 11 ವರ್ಷದ ಬಾಲಕನೊಬ್ಬ ಗಾಯಗೊಂಡಿರುವ ಘಟನೆ ಜುಲೈ 23ರಂದು ಸಂಭವಿಸಿದೆ.
ಕೊಯಿಲಾ ಮೂಲದ ಸನ್ಯಾಸಿಗುಡ್ಡೆ ನಿವಾಸಿ ಅಬ್ದುಲ್ ಮಜೀದ್ ಎಂಬುವರು ತಮ್ಮ ಟಾಟಾ ಏಸ್ ವಾಹನದಲ್ಲಿ ಉಪ್ಪಿನಂಗಡಿಯಿಂದ ಪುತ್ತೂರು ಕಡೆಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಸಂಚರಿಸುತ್ತಿದ್ದ ವೇಳೆ ಏಕಾಏಕಿ ವಾಹನದ ಚಕ್ರ ರಸ್ತೆಯ ಅಂಚಿಗೆ ಇಳಿದು, ವಾಹನ ಮಗುಚಿ ಬಿದ್ದಿದೆ ಎನ್ನಲಾಗಿದೆ.
ಈ ದುರಂತದಲ್ಲಿ ಚಾಲಕ ಅಬ್ದುಲ್ ಮಜೀದ್ ಅವರ 11 ವರ್ಷದ ಪುತ್ರ ಮೊಹಮ್ಮದ್ ಅಮೀನ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತಕ್ಕೆ ರಸ್ತೆ ಅವ್ಯವಸ್ಥೆಯೇ ಕಾರಣ?
ಸ್ಥಳೀಯರು ನೀಡಿದ ಮಾಹಿತಿಯಂತೆ, ಇತ್ತೀಚೆಗಷ್ಟೇ ಈ ಭಾಗದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿತ್ತು. ಆದರೆ, ರಸ್ತೆಯ ಇಕ್ಕೆಲಗಳಲ್ಲಿ ಸರಿಯಾಗಿ ಮಣ್ಣು ಭರ್ತಿ ಮಾಡದ ಕಾರಣ ರಸ್ತೆಯಂಚು ತಗ್ಗು ಬಿದ್ದಿದೆ. ಜೊತೆಗೆ ಡಿವೈಡರ್ ಕಾಮಗಾರಿಯೂ ಅಪೂರ್ಣಗೊಂಡಿದ್ದು, ಸವಾರರು ಸಣ್ಣ ಪ್ರಮಾಣದಲ್ಲಿ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
