ದಾವಣಗೆರೆ: ಖಾಸಗಿ ಆಸ್ಪತ್ರೆಯ ವೈದ್ಯರು ನೀಡಿದ ಎಕ್ಸ್‌ಪೈರಿ (ಅವಧಿ ಮುಗಿದ) ಔಷಧಿಯಿಂದಾಗಿ 11 ತಿಂಗಳ ಕಂದಮ್ಮನೊಂದು ಅಸಹಜವಾಗಿ ಮೃತಪಟ್ಟಿರುವ ದಾರುಣ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿ ನಡೆದಿದೆ.
ಸಾಸ್ವೇಹಳ್ಳಿ ವ್ಯಾಪ್ತಿಯ ಹನುಮನಹಳ್ಳಿ ಗ್ರಾಮದ ನಿವಾಸಿಗಳಾದ ವಸುಂಧರ ಹಾಗೂ ಲೋಕೇಶ್ ದಂಪತಿಯ 11 ತಿಂಗಳ ಪುತ್ರಿ ಪೂರ್ವಿಕ ಮೃತಪಟ್ಟ ದುರ್ದೈವಿ ಮಗು.
ಸಂಭವಿಸಿದ್ದೇನು?
ಅನಾರೋಗ್ಯದಿಂದ ಬಳಲುತ್ತಿದ್ದ ಮಗು ಪೂರ್ವಿಕಳನ್ನು ಪೋಷಕರು ಚಿಕಿತ್ಸೆಗಾಗಿ ಸಾಸ್ವೇಹಳ್ಳಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿನ ವೈದ್ಯರು ಪರಿಶೀಲಿಸಿ ಮಗುವಿಗೆ ಕೆಲವು ಔಷಧಿಗಳನ್ನು ನೀಡಿದ್ದರು. ವೈದ್ಯರು ಸೂಚಿಸಿದ ಔಷಧಿಯನ್ನು ನೀಡಿದ ಕೆಲವೇ ಕ್ಷಣಗಳಲ್ಲಿ ಮಗುವಿನ ಆರೋಗ್ಯ ಪರಿಸ್ಥಿತಿ ತೀವ್ರ ವಿಕೋಪಕ್ಕೆ ತಿರುಗಿ, ಮಗು ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ಪೋಷಕರ ಆಕ್ರೋಶ – ಪೊಲೀಸ್ ದೂರು:
ವೈದ್ಯರು ನೀಡಿದ್ದ ಔಷಧಿಯ ಅವಧಿ ಮುಗಿದಿತ್ತು (Expired Medicine). ಇದನ್ನು ಗಮನಿಸದೇ ನಿರ್ಲಕ್ಷ್ಯದಿಂದ ಮಗುವಿಗೆ ನೀಡಿದ್ದೇ ಸಾವಿಗೆ ನೇರ ಕಾರಣ ಎಂದು ಪೋಷಕರು ಹಾಗೂ ಸಂಬಂಧಿಕರು ಆಸ್ಪತ್ರೆ ಸಿಬ್ಬಂದಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ತನಿಖೆ ಹಂತದಲ್ಲಿದೆ.
