ಸಾಂದರ್ಭಿಕ ಚಿತ್ರ
ಬೆಂಗಳೂರು:ಸಣ್ಣ ವಿಷಯಕ್ಕೆ ಕೋಪಗೊಂಡು ತನ್ನದೇ 11 ತಿಂಗಳ ಮಗುವನ್ನು ನೆಲಕ್ಕೆ ಎಸೆದು, ಕ್ರೌರ್ಯ ಮೆರೆದಿರುವ ಅಮಾನವೀಯ ಘಟನೆಯೊಂದು ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ನಾಮಕರಣ ಶುಭ ಸಮಾರಂಭಕ್ಕೆ ಪತ್ನಿ ಮತ್ತು ಆಕೆಯ ಕುಟುಂಬದವರು ತಡವಾಗಿ ಬಂದರು ಎಂಬ ಕ್ಷುಲ್ಲಕ ಕಾರಣಕ್ಕೆ ಕೋಪೋದ್ರಿಕ್ತನಾದ ಪತಿಯೊಬ್ಬ ಈ ದುಷ್ಕೃತ್ಯ ಎಸಗಿದ್ದಾನೆ.
ಘಟನೆಯ ವಿವರ:
ಬೆಂಗಳೂರಿನ ಕಲ್ಯಾಣ ಮಂಟಪವೊಂದರಲ್ಲಿ ಮಗುವಿನ ನಾಮಕರಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬೆಳಗಿನ ಶುಭ ಮುಹೂರ್ತಕ್ಕೆ ಪತ್ನಿ ಹಾಗೂ ಆಕೆಯ ಮನೆಯವರು ಸುಮಾರು ಒಂದು ಗಂಟೆ ತಡವಾಗಿ ಆಗಮಿಸಿದ್ದಾರೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಪತಿ, ನೆರೆದಿದ್ದ ಸಂಬಂಧಿಕರ ಎದುರಲ್ಲೇ ಪತ್ನಿಯ ಜೊತೆ ಜಗಳ ತೆಗೆದು ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ.
ಜಗಳ ಬಿಡಿಸಲು ಮಧ್ಯಪ್ರವೇಶಿಸಿದ ಮಾವನ (ಪತ್ನಿಯ ತಂದೆ) ಮೇಲೆಯೂ ಆರೋಪಿ ದಾಳಿ ಮಾಡಿದ್ದಾನೆ. ಈ ವೇಳೆ ಮಾವನ ಕೈಯಲ್ಲಿದ್ದ 11 ತಿಂಗಳ ಕಂದಮ್ಮನನ್ನು ಬಲವಂತವಾಗಿ ಕಸಿದುಕೊಂಡು, ರಭಸದಿಂದ ನೆಲಕ್ಕೆ ಅಪ್ಪಳಿಸಿದ್ದಾನೆ.
ಮಗುವಿನ ಸ್ಥಿತಿ ಗಂಭೀರ:
ನೆಲಕ್ಕೆ ಬಿದ್ದ ರಭಸಕ್ಕೆ ಮಗುವಿನ ತಲೆಬುರುಡೆಗೆ ತೀವ್ರ ಪೆಟ್ಟಾಗಿದ್ದು, ತಲೆಬುರುಡೆ ಮುರಿದಿದೆ (ಫ್ರ್ಯಾಕ್ಚರ್). ತಕ್ಷಣವೇ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಐಸಿಯುನಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಗಲಾಟೆ ಹಂತಕ್ಕೆ ತಲುಪಿದಾಗ ತಡೆಯಲು ಬಂದ ಹೋಟೆಲ್ ಸಿಬ್ಬಂದಿಯೊಬ್ಬರಿಗೂ ಆರೋಪಿ ಕಚ್ಚಿ ಗಾಯಗೊಳಿಸಿದ್ದಾನೆ ಎಂದು ತಿಳಿದುಬಂದಿದೆ.
ಆರೋಪಿ ಜೈಲುಪಾಲು:
ಘಟನೆಗೆ ಸಂಬಂಧಿಸಿದಂತೆ ಮಗುವಿನ ತಾಯಿ ನೀಡಿದ ದೂರಿನನ್ವಯ, ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತಿಯ ಜೊತೆಗೆ ಆತನಿಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಅತ್ತೆಯ ವಿರುದ್ಧವೂ ಜುವೆನೈಲ್ ಜಸ್ಟಿಸ್ (JJ) ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಸದ್ಯ ಘೋರ ಕೃತ್ಯ ಎಸಗಿದ ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
