ಮಂಗಳೂರು: ನ್ಯಾಯಾಲಯದಿಂದ ಸರಣಿ ಬಂಧನ ವಾರೆಂಟ್ ಹೊರಡಿಸಲಾಗಿದ್ದರೂ, ಪೊಲೀಸರ ಕಣ್ಣಿಗೆ ಮಣ್ಣೆರಚಿ ತಲೆಮರೆಸಿಕೊಂಡಿದ್ದ ಹಳೆಯ ಆರೋಪಿಯೊಬ್ಬನನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಅತ್ಯಂತ ಚಾಣಾಕ್ಷತನದಿಂದ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಭದ್ರಾವತಿಯ ಸಂತೆ ಮೈದಾನದ ಬೋವಿ ಕಾಲನಿ ನಿವಾಸಿಯಾದ ಚಂದ್ರ ಶೇಖರ್ ಲಿಂಗರಾಜ್ ಬೋವಿ (26) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಏನಿದು ಪ್ರಕರಣ?
ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ 2024ರಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಈತ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದ. ಆದರೆ, ಜಾಮೀನು ಸಿಕ್ಕ ನಂತರ ಕಳೆದ ಒಂದೂವರೆ ವರ್ಷದಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಯ ವಿರುದ್ಧ ಬರೋಬ್ಬರಿ 14 ಬಾರಿ ದಸ್ತಗಿರಿ (ಬಂಧನ) ವಾರೆಂಟ್ ಹೊರಡಿಸಿತ್ತು. ಆದರೂ ಆರೋಪಿ ತನ್ನ ವಾಸದ ವಿಳಾಸವನ್ನು ಪದೇ ಪದೇ ಬದಲಾಯಿಸುತ್ತಾ ಪೊಲೀಸರ ಕೈಗೆ ಸಿಗದೆ ಆಟವಾಡಿಸುತ್ತಿದ್ದ.
ಪೊಲೀಸರ ಸಿನಿಮೀಯ ಕಾರ್ಯಾಚರಣೆ:
ಆರೋಪಿಯ ಪತ್ತೆಗಾಗಿ ಜಾಲ ಬೀಸಿದ್ದ ಕಂಕನಾಡಿ ನಗರ ಠಾಣೆಯ ವಾರಂಟ್ ಸಿಬ್ಬಂದಿಯಾದ ಬಾಲರಾಜ್ ಮತ್ತು ರವಿಕುಮಾರ್ ಅವರಿಗೆ ಜುಲೈ 11 ರಂದು ಆರೋಪಿಯ ಅಡಗುತಾಣದ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಬಾಳೆಹೊನ್ನೂರು ಸಮೀಪದ ಮಲ್ಲಿಗೇಹಳ್ಳಿ ಮೈದಾಳು ಎಂಬಲ್ಲಿ ದಾಳಿ ನಡೆಸಿ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ.
ಬಂಧಿತ ಆರೋಪಿಯನ್ನು ಸದ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
