ಮಂಗಳೂರು: ಕರಾವಳಿಯಲ್ಲಿ ಯುವಜನತೆ ಮತ್ತು ವಿದ್ಯಾರ್ಥಿಗಳನ್ನು ಮಾದಕದ್ರವ್ಯ ಜಾಲದಿಂದ ಮುಕ್ತಗೊಳಿಸಲು ಮಂಗಳೂರು ನಗರ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಸೋಮವಾರ ಕೋಟೆಕಾರ್ ಬೀರಿ ಹಾಗೂ ಕೊಣಾಜೆ ವ್ಯಾಪ್ತಿಯಲ್ಲಿ ಪ್ರಮುಖ ಕಾಲೇಜುಗಳ ಬಸ್‌ಗಳನ್ನು ತಡೆದು ವಿದ್ಯಾರ್ಥಿಗಳಿಗೆ ದಿಢೀರ್ ಡ್ರಗ್ ಪರೀಕ್ಷೆ ನಡೆಸಲಾಗಿದೆ.
ಖಚಿತ ಮಾಹಿತಿ ಹಾಗೂ ಮುನ್ನೆಚ್ಚರಿಕಾ ಕ್ರಮವಾಗಿ ನಡೆದ ಈ ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು 159 ವಿದ್ಯಾರ್ಥಿಗಳನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಈ ಪೈಕಿ ಒಬ್ಬ ವಿದ್ಯಾರ್ಥಿ ಮಾದಕದ್ರವ್ಯ ಸೇವಿಸಿರುವುದು ಧೃಡಪಟ್ಟಿದೆ.
ಬಸ್‌ಗಳನ್ನು ತಡೆದು ಮಲ್ಟಿ-ಡ್ರಗ್ ಕಿಟ್ ಮೂಲಕ ಪರೀಕ್ಷೆ
ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅವರ ಮಾರ್ಗದರ್ಶನದಲ್ಲಿ, ದಕ್ಷಿಣ ಹಾಗೂ ಕೇಂದ್ರ ಉಪವಿಭಾಗದ ಎಸಿಪಿಗಳ ನೇತೃತ್ವದಲ್ಲಿ ಈ ಜಂಟಿ ಕಾರ್ಯಾಚರಣೆ ನಡೆಯಿತು. ಸಂಜೆ 4:30 ರಿಂದ 6:00 ಗಂಟೆಯ ಅವಧಿಯಲ್ಲಿ ಖಾಸಗಿ ಹಾಗೂ ವಿವಿಧ ಕಾಲೇಜು ಬಸ್‌ಗಳನ್ನು ಮಾರ್ಗಮಧ್ಯದಲ್ಲೇ ತಡೆದು, 'ಮಲ್ಟಿ ಡ್ರಗ್ ಟೆಸ್ಟಿಂಗ್ ಕಿಟ್' ಬಳಸಿಕೊಂಡು ವಿದ್ಯಾರ್ಥಿಗಳ ಮಾದರಿಗಳನ್ನು ಸ್ಥಳದಲ್ಲೇ ಪರೀಕ್ಷಿಸಲಾಯಿತು.
ಬೀರಿಯಲ್ಲಿ ನಡೆದ ಪರೀಕ್ಷೆಯಲ್ಲಿ ಒಬ್ಬನಿಗೆ ಪಾಸಿಟಿವ್
ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಕಾರ್ ಬೀರಿಯಲ್ಲಿ ನಡೆದ ತಪಾಸಣೆ ವೇಳೆ ಎಸ್‌ಡಿಎಂ, ನಿಟ್ಟೆ ಕೆ.ಎಸ್. ಹೆಗ್ಡೆ, ಸೇಂಟ್ ಅಲೋಶಿಯಸ್, ಪಿ.ಎ. ಕಾಲೇಜು, ಬ್ಯಾರೀಸ್ ಇನ್‌ಸ್ಟಿಟ್ಯೂಟ್, ಟಿಪ್ಪು ಸುಲ್ತಾನ್ ಹಾಗೂ ಕೆನರಾ ಕಾಲೇಜಿನ ಒಟ್ಟು 72 ವಿದ್ಯಾರ್ಥಿಗಳನ್ನು ಪರೀಕ್ಷಿಸಲಾಯಿತು. ಈ ಪೈಕಿ 71 ವಿದ್ಯಾರ್ಥಿಗಳ ವರದಿ ನೆಗೆಟಿವ್ ಬಂದಿದ್ದು, ಒಬ್ಬ ವಿದ್ಯಾರ್ಥಿಯ ವರದಿ ಪಾಸಿಟಿವ್ ಬಂದಿದೆ.
ಇನ್ನೊಂದೆಡೆ, ಕೊಣಾಜೆ ಪೊಲೀಸ್ ಠಾಣಾ ಸರಹದ್ದಿನ ಬಂಟ್ಸ್ ಭವನದ ಬಳಿ ಪಿ.ಎ. ಕಾಲೇಜಿನ ಎರಡು ಬಸ್‌ಗಳನ್ನು ತಡೆದು 87 ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಇಲ್ಲಿ ಪರೀಕ್ಷೆಗೊಳಗಾದ ಎಲ್ಲಾ 87 ವಿದ್ಯಾರ್ಥಿಗಳ ವರದಿಯೂ ನೆಗೆಟಿವ್ ಬಂದಿದೆ ಎಂದು ಕಮಿಷನರೇಟ್ ಮೂಲಗಳು ತಿಳಿಸಿವೆ.
ಕೌನ್ಸೆಲಿಂಗ್‌ಗೆ ಚಿಕಿತ್ಸಾತ್ಮಕ ಹೆಜ್ಜೆ
ಪರೀಕ್ಷೆಗೆ ಒಳಗಾದ 159 ವಿದ್ಯಾರ್ಥಿಗಳಲ್ಲಿ ಕೇವಲ ಒಬ್ಬನಲ್ಲಿ ಮಾತ್ರ ಡ್ರಗ್ ಅಂಶ ಪತ್ತೆಯಾಗಿರುವುದು ಕ್ಯಾಂಪಸ್‌ಗಳಲ್ಲಿ ಜಾಗೃತಿ ಮೂಡುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಡ್ರಗ್ಸ್ ಪಾಸಿಟಿವ್ ಬಂದಿರುವ ವಿದ್ಯಾರ್ಥಿಯ ವಿರುದ್ಧ ಅಗತ್ಯ ಕಾನೂನು ಕ್ರಮಗಳನ್ನು ಪೂರ್ಣಗೊಳಿಸಿದ ಬಳಿಕ, ಆತನನ್ನು ಸೂಕ್ತ ಕೌನ್ಸೆಲಿಂಗ್ ಹಾಗೂ ಪುನರ್ವಸತಿ ಪ್ರಕ್ರಿಯೆಗೆ ಒಳಪಡಿಸಲಾಗುವುದು. ಕರಾವಳಿ ಭಾಗದಲ್ಲಿ ಮಾದಕದ್ರವ್ಯ ಮುಕ್ತ ವಾತಾವರಣ ನಿರ್ಮಿಸಲು ಇಂತಹ ದಿಢೀರ್ ಕಾರ್ಯಾಚರಣೆಗಳು ಮುಂದೆಯೂ ಮುಂದುವರಿಯಲಿವೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.
